Thursday, 17 December 2020

Neer Dosa with Chicken Curry,,❤️😜

 Neer Dosa with Chicken Curry! Isn't it Mouth watering ❤️👌 Neer Dosa could be paired with many delicious Veg and Non-Veg dishes! What you would like to have with Neer Dose ???


 ....

Tuesday, 15 December 2020

ವಿಮರ್ಶೆ : ಬದುಕಿನ ಭಾವನೆಗಳನ್ನು ಎತ್ತಿ ತೊರಿಸುವ ಕಥೆಗಳು

     ಗದಗ ಜಿಲ್ಲೆ ರೋಣ ತಾಲೂಕಿನ ರಾಜೂರ ಗ್ರಾಮದವರಾದ ಟಿ.ಎಸ್.ಗೊರವರ ರವರ ‘ಮಲ್ಲಿಗೆ ಹೂವಿನ ಸಖ’ (ಕಥಾ ಸಂಕಲನ) ಓದುಗನ ಭಾವನೆಗಳನ್ನು ಪ್ರಜ್ಞೆಯನ್ನಾಗಿ ಬಿಂಬಿಸು ಅಕ್ಷರಗಳ ಪುಂಜವನ್ನು ಕಾಣುತ್ತೇವೆ.
    ಹಳ್ಳಿ ಸೊಗಡನ್ನು ತಮ್ಮ ಆಡು ಭಾಷೆಯಲ್ಲಿ ಮನಸ್ಸಿಗೆ ಮುದ ನೀಡುವ ತಿಳವಳಿಕೆಯ ಬಿಂದುವಿನಲ್ಲಿ ಸಾಮಾಜಿಕ ಕಟ್ಟುಪಾಡುಗಳಿಗೆ ದನಿಗೆ ಕಿವಿಗೊಟ್ಟ ಕತೆಯಾಗಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆರು ಕಥೆಗಳನ್ನು ಒಳಗೊಂಡ ಈ ಕಥಾ ಹಂದರ ಸಂಗಾತ ಪುಸ್ತಕ ಎಂಬ ಪ್ರಕಾಶನ ಸಂಸ್ಥೆಯಡಿಯಲ್ಲಿ ಪ್ರಕಟಗೊಂಡಿದೆ. ಪ್ರತಿಯೊಂದು ಕಥೆಯು ಓದುಗನನ್ನು ಬೇರೆ ಕೆಲಸಗಳು ಸ್ಮೃತಿ ಪಟಲ ದಿಂದ ದೂರ ಉಳಿಯುವುದು ಕಂಡಿತ. ‘ಕತ್ತಲಿನಾಚೆ’ ಕತೆಯ ಪದ್ಮಾಳ ಹುಚ್ಚು ಕಾಲಾಂತರದಲ್ಲಿ ದೇವರಾಜನಿಗೂ ತಾಕಿಕೊಂಡ ಬಗೆಯನ್ನು ಯಾವ ಉದ್ವೇಗವೂ ಇಲ್ಲದೆ ತಣ್ಣಗೆ ಹೇಳಿ ಮುಗಿಸುವ ನಮ್ಮೊಳಗೊಂದು ತಳಮಳನ್ನು ಸೃಷ್ಟಿಸಿಬಿಡುತ್ತದೆ. ಹಾಗೇ ತಾಯವ್ವನ ಅಕ್ಕರೆ ಮಮತೆಗೆ ಅಂತಃಕರಣ ಮಿಡಿಯುತ್ತದೆ.
    ‘ಪೆಪ್ಪರಮೆಂಟ’ ಕತೆ ಓದುಗನ ಬಾಲ್ಯ ಕಣ್ತುಂಬಿ ಹೋಗುತ್ತದೆ. ಲೇಖಕರ ಪದ ಪುಂಜದಲ್ಲಿ ಡಬ್ಬ ಅಂಗಡಿಗೆ ಹೋಗಿ ಪೆಪ್ಪರಮೆಂಟು ತಿನ್ನುವ ಹಾಗೆ ಬಾಯಲ್ಲಿ ನೀರು ಬರುವುದಂತು ಕಂಡಿತ. ಬಾಲ್ಯನೆ ಹಾಗೇ ತಿನ್ನಲು ಕುರಕಲು ತಿಂಡಿಯೊAದಿದರೆ ಸಾಕು ಮತ್ತೊಂದು ಮೊಗದೊಂದು ಬೆಡವೇಬೇಡ. ಓದುವ ಸುಖದಲ್ಲಿಯೇ ಮಿಠಾಯಿ ತಿನ್ನುವ ಆಸೆ ಹುಟ್ಟಿಸಿ ಆದರೆ ಅದೇ ಪೆಪ್ಪರಮೆಂಟನ ಆಸೆಯೊಳಗೆ ಇಡೀ ಬದುಕೊಂದು ದುರಂತಮಯವಾಗುವ ಚಿತ್ರಣವನ್ನ ಆರ್ದ್ರವಾಗಿ ಕಟ್ಟಿಕೊಡುವಲ್ಲಿ ಕತೆ ಸಿಹಿಯೊಂದಿಗೆ ಕಹಿಯಾಗಿ ಅಂತ್ಯವಾಗುತ್ತದೆ.
    ‘ಮಲ್ಲಿಗೆ ಹೂವಿನ ಸಖ’ ಕಥೆ ಒಂದು ಚಟಕ್ಕೆ ಬೀಳುವ ಹಾಗೂ ಆ ಚಟಕ್ಕೆ ಬೀಳುವ ಹಾಗೂ ಆ ಚಟ ಬದುಕಿನ ಸುಖವನ್ನು ಕಸಿದುಕೊಳ್ಳುತ್ತಿದ್ದರೂ ಅದು ಕೊಡುವ ಆ ಕ್ಷಣದ ಸುಖದ ಮುಂದೆ ಸಾವು ಬಂದರೂ ಸರಿಯೇ ಚಟ ಬಿಡಲಾರೆ ಎಂಬ ಅಸಹಾಯಕತೆಗೆ ಶರಣಾಗುವ ಮನೋಧರ್ಮವನ್ನು ಮನೋಜ್ಞವಾಗಿ ಚಿತ್ರಿಸಿದೆ.


Sunday, 13 December 2020

ಓ ಮಾನವ ! ಕೊನೆಗೂ ನಿನ್ನ ಸಾವಿಗಾದವರು ಯಾರಯ್ಯ?

          

                                                                                                            

 ಓ ಮಾನವ ! ಕೊನೆಗೂ ನಿನ್ನ ಸಾವಿಗಾದವರು ಯಾರಯ್ಯ?

 ವೈರಾಣು ನಿನ್ನಿಂದ ಜಗತ್ತೇ ಹೈರಾಣು
 ಲಸಿಕೆ ಎಂಬುದು ಹುಸಿ ಆಗಿದೆ,
 ಎತ್ತ ನೋಡಿದರತ್ತ  ನಾನು ನನ್ನದು
 ನನ್ನಿಂದಲೇ ಎಂಬ ಅಹಂಕಾರ ಕುರುಡು
 ಮನುಕುಲದಿ ತುಂಬಿತ್ತು  ಅಂಧಕಾರ, ಮಮಕಾರವಿಲ್ಲದ ಜೀವನ ನಶ್ಚರವಾಗಿದೆ.

ಜ್ಞಾನ - ಅಜ್ಞಾನಗಳ ನಡುವೆ ಸಂಸ್ಕಾರ ಕಣ್ಣಿಗೆ ಕಂಡರೂ ಕುರಡಾಗಿದೆ, 

ಮುಖ ಮುಚ್ಚಿ ಹೊರಗೆ ಹೋಗಲೇನು ಭಯದಿ ಮುಸುಕು ಹಾಕಿರುವೆ.

ಸಂಧಿ-ಗೊಂದಿಗಳ ನಡುವೆ ಹೊರಗೆ ಹೋಗುವ ಸರದಿ, ಆದರೂ ಕಾಯುತ್ತ ಕುಳಿತಿದೆ ಕಾಣದ ಮೃತ್ಯು ಕೂಪ
ಹೊರಗೆ ಹೋದರೆ ಆರು -ಮೂರಡಿ ಸಮಾಧಿ,
ಗೋಡೆಗಳ ನಡುವೆ ಏನಿದು ಪ್ರಪಂಚ?  

ಕ್ರಿಯೆ-ಅಂತ್ಯ ಕ್ರಿಯಗಳ ನಡುವೆ ಮರೆತು ಬಿಟ್ಟಿದೆ ನನ್ನೊಳಗಿನ -ನಿನ್ನೊಳಗಿನ ಸಮಾಚಾರ -ವ್ಯವಹಾರ  
ಭೂಮಿಯ ಕೊರೆದು ಮೆರೆದು ಬಿಟ್ಟೆ -ಆಕಾಶದಲ್ಲಿ ಹಾರಾಡಿ ಹಾರಾಡಿ ಹರಡಿದೆಯ.

ಓ ಮಾನವ ! ಕೊನೆಗೂ ನಿನ್ನ ಸಾವಿಗಾದವರು ಯಾರಯ್ಯ?

                                                                                                                               - ರೋಹಿತಕುಮಾರ
                                                                                                                                        ಕೊಪ್ಪಳ.                                                                                                                                              

 

 COVID-19 Prompts the Question: Why Value Human Life? – AIER

 

 

 

 

 

 

Saturday, 12 December 2020

ಅಂಕಣ : ಶಿಕ್ಷಣ ಮಾಧ್ಯಮವಾಗಿ ಕನ್ನಡ

 
ಗ್ರಾಮಾಂತರ ಪ್ರದೇಶದಲ್ಲಿರುವ ನಮ್ಮ ಕಾಲೇಜಿಗೆ ಪ್ರವೇಶ ಕೋರಿ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ ಬಹುತೇಕ ವಾಣಿಜ್ಯ ವಿಭಾಗಕ್ಕೆ ಸೇರಲು ಬಯಸಿ ಬರುವವರಾಗಿದ್ದರು. ಪ್ರೌಢಶಾಲೆಯಲ್ಲಿ ಕನ್ನಡಮಾಧ್ಯಮದಲ್ಲಿ ಅಭ್ಯಾಸಮಾಡಿ ಕಡಿಮೆ ಅಂಕ ಗಳಿಸಿ ತೇರ್ಗಡೆಯಾಗಿದ್ದ ವಿದ್ಯಾರ್ಥಿಗಳಿಗೂ ಕಲಾ ವಿಭಾಗದ ಬದಲಿಗೆ ವಾಣಿಜ್ಯವಿಭಾಗವನ್ನೇ ಸೇರುವ ತವಕ. ಅಂಥವರನ್ನು ಹಿಮ್ಮೆಟ್ಟಿಸಲು ಒಂದು ಅಸ್ತ್ರವಂತೂ ಸಿದ್ಧವಾಗಿರುತ್ತಿತ್ತು. ಕಾಮರ್ಸ್ ತೆಗೆದುಕೊಂಡರೆ ಅಕೌಂಟೆನ್ಸಿ ವಿಷಯವನ್ನಿಡೀ ಇಂಗ್ಲೀಷ್ನಲ್ಲೇ ಉತ್ತರಿಸಬೇಕಾಗುತ್ತದೆ ಎಂದು ಹೆದರಿಸಿದರೆ ಆಯಿತು.
ಆದರೆ, ಈ ವಿಷಯ ನನ್ನನ್ನೂ ಕಾಡದಿರಲಿಲ್ಲ. ಈ ಸಮಸ್ಯೆಯ ವಾಸ್ತವ ಅಂಶವೇನೆಂದು ವಾಣಿಜ್ಯವಿಭಾಗದ ಉಪನ್ಯಾಸಕರನ್ನೇ ಕೇಳಿದೆ. ಹೌದು ಸರ್, ಅಕೌಂಟೆನ್ಸಿ ವಿಷಯವನ್ನು ಕನ್ನಡದಲ್ಲಿ ಬರೆಯಲಾಗುವುದಿಲ್ಲ ಎಂದರು. ಸರಿಯಾದ ಪಠ್ಯಗಳೂ ಕನ್ನಡದಲ್ಲಿ ಲಭ್ಯವಿಲ್ಲ. ಪರೀಕ್ಷೆಯಲ್ಲೇನೋ ಕನ್ನಡದಲ್ಲೂ ಪ್ರಶ್ನಪತ್ರಿಕೆ ಸಿದ್ಧಪಡಿಸಿ ಕೊಡುತ್ತಾರೆ. ಆದರೆ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಅಧ್ಯಾಪಕರೂ , ಉತ್ತರಿಸುವ ವಿದ್ಯಾರ್ಥಿಗಳೂ ತೀರಾ ಕಡಿಮೆ ಎಂಬ ವಿವರಣೆಯನ್ನು ಕೇಳಿ ಆಶ್ಚರ್ಯವಾಯಿತು. ನಮ್ಮ ಕಾಲೇಜಿನ ಮಕ್ಕಳಿಗಾದರೂ ಕನ್ನಡಮಾಧ್ಯಮದಲ್ಲಿ ಕಲಿಸಬಹುದಲ್ಲ ಎಂದುದಕ್ಕೆ ಸರಿಯಾದ ಕನ್ನಡಪಠ್ಯಗಳಿಲ್ಲದೆ ಹೇಗೆ ಬೋಧಿಸುವುದೆಂದು ಆತ ನಿಸ್ಸಹಾಯಕತೆಯನ್ನು ವ್ಯಕ್ತಪಡಿಸಿದರು. ಇರಲಿ, ನೋಡೋಣವೆಂದು ಮೈಸೂರಿನ ಪ್ರಸಿದ್ಧ ಅಂಗಡಿಯೊಂದಕ್ಕೆ ಹೋಗಿ ಪಿಯುಸಿಯ ಅಕೌಂಟೆನ್ಸಿ ಕನ್ನಡಮಾಧ್ಯಮದ ಪಠ್ಯಪುಸ್ತಕ ಕೊಡಿ ಎಂದೆ. ಆತ ಅಚ್ಚರಿಯಿಂದ ನನ್ನ ಮುಖವನ್ನೇ ಒಮ್ಮೆ ನೋಡಿದರು. ಯಾಕೆ, ಪುಸ್ತಕ ಇಲ್ಲವೇ ಎಂದುದಕ್ಕೆ ಮೌನವಾಗಿ ಕಪಾಟಿನಿಂದ ಪುಸ್ತಕವೊಂದನ್ನು ಹುಡುಕಿ ತೆಗೆದು ಧೂಳು ಕೊಡವಿದರು. ಪುಸ್ತಕದ ಬೆಲೆ ಹೇಳುವುದರ ಜೊತೆಗೆ ಇನ್ನೊಂದು ಮಾತು ಸೇರಿಸಿದರು: ” ಬೇಡವೆಂದು ವಾಪಸ್ ತಂದರೆ ತೆಗೆದುಕೊಳ್ಳುವುದಿಲ್ಲ”! ಇದಾಗಿ ಏಳೆಂಟು ವರ್ಷಗಳು ಕಳೆದಿವೆ. ಪಠ್ಯಕ್ರಮವೂ ಬದಲಾಗಿದೆ. ಇವತ್ತಿಗೂ ಹನ್ನೊಂದನೇ ತರಗತಿಯ ಅಕೌಂಟೆನ್ಸಿ ಅಥವಾ ಲೆಕ್ಕಶಾಸ್ತ್ರದ ಪಠ್ಯಪುಸ್ತಕಗಳು ಕನ್ನಡದಲ್ಲಿ ಸಿಗುತ್ತಿಲ್ಲ. ಇತ್ತ ನಾವು ಇಂಜನಿಯರಿಂಗ್ ಹಾಗೂ ವೈದ್ಯಕೀಯ ಮತ್ತಿತರ ಉನ್ನತ ಶಿಕ್ಷಣ ತರಗತಿಗಳನ್ನು ಕನ್ನಡದಲ್ಲಿ ಬೋಧಿಸುವ ದೊಡ್ಡದೊಡ್ಡ ಮಾತುಗಳನ್ನು ಆಡುತ್ತಿದ್ದೇವೆ.
ಕನ್ನಡ ಭಾಷೆಯ ಅಭಿವೃದ್ದಿಯ ಬಗ್ಗೆ ಮಾತನಾಡುವಾಗಲೆಲ್ಲ, ಆಡಳಿತ ಮತ್ತಿತರ ವ್ಯವಹಾರಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಕೊಡುವಷ್ಟು ಮಹತ್ವವನ್ನು ಶಿಕ್ಷಣಕ್ಷೇತ್ರದ ವಿಷಯದಲ್ಲಿ ನೀಡದಿರುವುದು ಅಚ್ಚರಿಯ ವಿಷಯವಾಗಿದೆ. ಇನ್ನು ಗೋಕಾಕ್‌ವರದಿಯ ಅನುಷ್ಠಾನ, ತತ್ಸಂಬಂಧವಾದ ಚಳುವಳಿ, ವಾದ ಪ್ರತಿವಾದ ಮೊದಲಾದವು ಶೈಕ್ಷಣಿಕವಾಗಿ ಕನ್ನಡ ಜಾಗೃತಿಯ ಸೂಚನೆ ನೀಡಿದರೂ ಅವೆಲ್ಲದರ ಒಟ್ಟಭಿಪ್ರಾಯ ಪ್ರೌಢಶಾಲೆಯಲ್ಲಿ ಮಾತೃಭಾಷಾ ಬೋಧನೆಗೆ ಸಂಬಂಧಪಟ್ಟಂತೆ ಎಷ್ಟು ಅಂಕಗಳ ಪ್ರಶ್ನ ಪತ್ರಿಕೆಯಿರಬೇಕು, ಕನ್ನಡ ಪತ್ರಿಕೆಗೆ ಸಂಸ್ಕೃತಕ್ಕಿಂತ ಇಪ್ಪತ್ತೈದು ಅಂಕವಾದರೂ ಹೆಚ್ಚಿಗೆ ನಿಗದಿ ಪಡಿಸದಿದ್ದರೆ ಕನ್ನಡದ ಘನತೆ ಏನಾದೀತು ಎಂಬಷ್ಟಕ್ಕೆ ಸೀಮಿತವಾಗಿದೆಯೇ ಹೊರತು ಸಮಗ್ರ ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಜಾರಿಗೆ ತರಬೇಕಾದುದರ ಅವಶ್ಯಕತೆ, ಅನಿವಾರ್ಯಷತೆಗಳ ಬಗೆಗೆ ಏನನ್ನೂ ಹೇಳುವುದಿಲ್ಲ.
ಯಾವುದೇ ಭಾಷೆಯ ರೂಢಿ, ಬೆಳವಣಿಗೆಗಳು, ಒಂದು ಮಗು ಮೊದಲಿಗೆ ಮನೆಯಲ್ಲೂ ಅನಂತರ ಶಾಲೆಯಲ್ಲೂ ಏನನ್ನೂ ಹೇಗೆ ಕಲಿಯುತ್ತದೆ ಎಂಬುದನ್ನೇ ಮುಖ್ಯವಾಗಿ ಅವಲಂಬಿಸಿವೆ. `ಮಾತೃಭಾಷೆ’ ಎಂಬ ಪದ, ಮಗು ಶಾಲೆಗೆ ಕಾಲಿರಿಸುವ ಮೊದಲೇ ತನ್ನ ಮನೆಯ ಪರಿಸರದಲ್ಲಿ ಕೇಳಿ ತಿಳಿದು ಕಲಿತ ನುಡಿಗೆ ಅನ್ವಯವಾಗುತ್ತದೆ. ಮಾತೃಭಾಷೆಯೆಂಬುದು `ಮಾತೃ’ ಎಂದರೆ ತಾಯಿಗೇ ಸಂಬಂಧಪಟ್ಟಿರುವುದೆಂದು ಅರ್ಥೈಸಬೇಕಾಗಿಲ್ಲ. ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ಮಗುವಿಗೆ ಪರಿಚಿತವಾಗುವ ಭಾಷೆ ಪ್ರಾದೇಶಿಕ ಭಾಷೆಯೂ ಆಗಿರಬಹುದು. ಮಗು ಶಿಕ್ಷಣವನ್ನು ಪಡೆಯಲಿಕ್ಕಾಗಿ ಶಾಲೆಯನ್ನು ಪ್ರವೇಶಿಸುವಾಗ ತಾನು ಮನೆಯಲ್ಲಿ ಕೇಳಿ, ಕಲಿತ ಭಾಷೆಗಿಂತ ಭಿನ್ನವಾದ ಭಾಷೆಯೊಂದು ಮಾಧ್ಯಮವಾಗಿ ಎದುರಾಗುವಾಗ ಮಗುವಿಗೆ ಸಹಜವಾಗಿಯೆ ಕಕ್ಕಾಬಿಕ್ಕಿಯಾಗುತ್ತದೆ. ಭಿನ್ನವಾದ ಭಾಷಾ ಮಾಧ್ಯಮದ ಪರಿಸರಕ್ಕೆ ಒಗ್ಗಿಕೊಳ್ಳಲು ಅದಕ್ಕೆ ಸುಲಭ ಸಾಧ್ಯವೇನಲ್ಲ.
ವಿದ್ಯಾರ್ಥಿಗೆ ತನ್ನ ಮಾತೃಭಾಷಾ ಮಾಧ್ಯಮದ ಮೂಲಕ ಕೊಡಲಾಗುವ ಶಿಕ್ಷಣವನ್ನು ಗ್ರಹಿಸಲು ಸಾಧ್ಯವಾಗುವಂತೆ ಅನ್ಯಭಾಷೆಗಳಿಂದ ಸಾಧ್ಯವಾಗದೆಂದು ಶಿಕ್ಷಣ ತಜ್ಞರು ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದಾರೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತುಕೊಂಡಷ್ಟೂ ವ್ಯಕ್ತಿಯ ತಿಳುವಳಿಕೆ ಮಟ್ಟ, ವ್ಯಾವಹಾರಿಕ ಕೌಶಲ, ಭಾಷಾ ಸಂಪತ್ತು, ಸಾಹಿತ್ಯ ಜ್ಞಾನ ಹೆಚ್ಚುವುದರಲ್ಲಿ ಸಂಶಯವಿಲ್ಲ. ಇದೇನೇ ಇದ್ದರೂ ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಮಾತೃಭಾಷೆಯಲ್ಲಿ ವ್ಯವಹರಿಸಬಲ್ಲಷ್ಟು ಸುಲಭವಾಗಿ, ಕಷ್ಟಪಟ್ಟು ಕಲಿಯಬೇಕಾದ ಇತರ ಭಾಷೆಗಳಲ್ಲಿ ವ್ಯವಹರಿಸಲಾರನು.
ಮಗುವಿಗೆ ಅದರ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯೇ ಅತ್ಯುತ್ತಮ ಶಿಕ್ಷಣ ಮಾಧ್ಯಮವೆಂದು ಪ್ರಪಂಚದ ಎಲ್ಲ ಶಿಕ್ಷಣತಜ್ಞರೂ ಅಭಿಪ್ರಾಯ ಪಡುತ್ತಾರೆ. ಒಂದು ವಿದೇಶೀ ಮಾಧ್ಯಮದಲ್ಲಿ ಕಲಿಯುವುದೆಂದರೆ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಬಾಯಿಪಾಠ ಮಾಡುವುದಕ್ಕೇ ಹೆಚ್ಚು ಅವಕಾಶ ನೀಡಿದಂತಾಗುವುದೆಂದು ತಜ್ಞರ ಅಭಿಮತ. “ತಮ್ಮದಲ್ಲದ ಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಂತೆಯೇ” ಎಂದು ಗಾಂಧೀಜಿ ವರ್ಣಿಸಿದ್ದರೆ, “ವಿದ್ಯಾರ್ಥಿಯ ಭಾಷೆಯಿಂದ ಶಿಕ್ಷಣದ ಭಾಷೆಯ ವಿಚ್ಛೇದನಗೊಂಡಿರುವುದು ಭಾರತ ಹೊರತು ಪ್ರಪಂಚದ ಇನ್ನಾವ ದೇಶದಲ್ಲೂ ಕಾಣಸಿಗದು” ಎಂದು ರವೀಂದ್ರನಾಥ ಠಾಕೂರರು ಆಶ್ಚರ್ಯ ಪಟ್ಟಿದ್ದಾರೆ.
ತನ್ನ ಮಾತೃಭಾಷೆಯ ಮೂಲಕ ಮಗು ವಿಚಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಮಗುವಿಗೆ ಅದರ ಪರಿಸರದೊಂದಿಗೆ ಸಂಪರ್ಕ ಕಲ್ಪಿಸಿ ಅದನ್ನು ಸಮಾಜದ ಸಂಸ್ಕೃತಿ ಮತ್ತು ಅನುಭವದಲ್ಲಿ ಪಾಲುದಾರನನ್ನಾಗಿ ಮಾಡುತ್ತದೆ. ಇದನ್ನೇ ಬಿ.ಎಂ. ಶ್ರೀಯವರು ತಮ್ಮ “ಕನ್ನಡ ನಾಡಿಗೆ ಕನ್ನಡವೇ ಗತಿ” ಎಂಬ ಪ್ರಸಿದ್ಧ ಭಾಷಣದಲ್ಲಿ ಹೀಗೆ ಪುಷ್ಟೀಕರಿಸುತ್ತಾರೆ. “ಭಾಷೆಯೆನ್ನುವುದು ನಿತ್ಯಗಟ್ಟಳೆಯ ವ್ಯಾಪಾರಕ್ಕಾಗಿ ಇರುವುದು ಮಾತ್ರವಲ್ಲ, ಅದರ ಮುಖ್ಯಕಾರ್ಯಾ ಒಂದು ಜನಾಂಗವನ್ನು ಸಂಸ್ಕಾರದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧಕವಾಗುವುದುಈ॒ ಕೆಲಸ ಕಷ್ಟಪಟ್ಟು ನಮ್ಮ ಬುದ್ಧಿ ಶಕ್ತಿಯನ್ನೆಲ್ಲಾ ವೆಚ್ಚ ಮಾಡಿ ಕಲಿಯುವ ಪರ ಭಾಷೆಯಿಂದ ನೆರವೇರುವುದಿಲ್ಲ. ಯಾವುದು ಸರಾಗವಾಗಿ ನಮ್ಮನ್ನು ಒಲಿದು ಬಂದಿರುತ್ತದೆಯೋ, ಯಾವುದು ನಮ್ಮನ್ನು ಬೆನ್ನಟ್ಟಿ ಬಂದು ರಕ್ತಗತವಾಗಿರುತ್ತದೋ ಅಂಥ ಭಾಷೆಯಿಂದ ಮಾತ್ರವೇ ಇದು ಸಾಧ್ಯ.
Siddaramaiah's love for Kannada can't stop closure notice for school

ಸದ್ಯ ಸಮ್ಮೇಳನ ಮುಂದೂಡುವುದು ಒಳಿತು


      ಹಾವೇರಿಯಲ್ಲಿ ಮುಂದಿನ ಸಾಲಿನ ಫೆ.೨೬ ರಿಂದ ೨೮ರ ವರೆಗೆ ಮೂರು ದಿನಗಳ ಕಾಲ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಸಾಪ ತೀರ್ಮಾನಿಸಿದೆ.
        ವಿಶ್ವಾದ್ಯಂತ ಕೊರೊನಾ ಮಾರಿ ಜನರ ಜೀವವನ್ನು ಹಿಂಡಿ ಹಿಪ್ಪಿ ಮಾಡಿದೆ. ಲಕ್ಷಗಟ್ಟಲೆ ಜನ ಸಾವಿನ ಮನೆ ಸೇರಿದ್ದಾರೆ. ದೇಶ ಮತ್ತು ನಮ್ಮ ರಾಜ್ಯದಲ್ಲೂ ಪ್ರತಿ ದಿನ ‘ಕೋವಿಡ್ ಸೋಂಕು’ ತ್ವರಿತ ಗತಿಯಲ್ಲಿ ಹರಡುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಸಾವು ಸಂಭವಿಸುತ್ತಿವೆ. ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹಲವು ಜನವರ್ಗದ ಬದುಕು ಅಸಹನೀಯವಾಗಿದೆ. ನಿಯಂತ್ರಣಕ್ಕೆ ಸರ್ಕಾರ ಕೂಡ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಲ್ಲದೆ ಸಭೆ, ಸಮಾರಂಭ, ಮದುವೆ ಮುಂಜಿಗಳಿಗೂ ಜನರು ಸೇರುವುದನ್ನು ನಿರ್ಭಂದಗೊಳಿಸಿ ಆದೇಶಿದೆ. ದೇಶದ ಸ್ವಾತಂತ್ರೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂತಹ ಪ್ರಮುಖ ಸಮಾರಂಭ ಹಾಗೂ ದೇಶ ವಿದೇಶಗಳ ಜನರ ಮೆಚ್ಚುಗೆಗಳಿಸಿರುವ ‘ಮೈಸೂರು ದಸರಾ’ ಉತ್ಸವವನ್ನು ಸರಕಾರ ಸರಳ ಸಾಂಕೇತಿಕವಾಗಿ ಆಚರಿಸಿರುವುದು ನಮ್ಮ ಕಣ್ಮುಂದೆ ಇದೆ. ಹೆಚ್ಚು ಜನರು ಒಂದೆಡೆ ಸೇರುವುದರಿಂದ ಕೊರೊನಾ ಒಬ್ಬರಿಂದೊಬ್ಬರಿಗೆ ತೀವ್ರಗತಿಯಲ್ಲಿ ಹರಡುವುದನ್ನು ತಡೆಗಟ್ಟಲು ಈ ಕ್ರಮ ಕೈ ಕೊಂಡಿರುವುದು ಉಚಿತವೆ. ಇನ್ನು ಫೆ. ತಿಂಗಳಲ್ಲಿ ೨ನೇ ಹಂತದ ಕೋವಿಡ್ ಹರಡಬಹುದುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸರಕಾರ ಕೂಡ ಮುಂಜಾಗ್ರತೆ ಕ್ರಮಕ್ಕೆ ಮುಂದಾಗಿದೆ.
    ರಾಜ್ಯದಲ್ಲಿ ಇಂತಹ ಸಂಧಿಗ್ದ ಗಂಡಾAತರ ಪರಿಸ್ಥಿತಿ ಇರುವಾಗ ಹಾವೇರಿಯಲ್ಲಿ ಅ.ಭಾ.ಕ ಸಾಹಿತ್ಯ ಸಮ್ಮೇಳನ ನಡೆಸುವುದು ಎಷ್ಟು ಉಚಿತ ಎಂಬುದನ್ನು ಎಲ್ಲರೂ ಮನಗಾಣಬೇಕು. ಹಾವೇರಿ ಸಮ್ಮೇಳನ ‘ಕೊರೊನಾ ಪಸರಿಸುವ’ ಕೇಂದ್ರವಾಗಬಾರದೆAಬುದು ನನ್ನ ಕಳಕಳಿ! ಸಮ್ಮೇಳನವನ್ನು ಇನ್ನಷ್ಟು ದಿವಸ ಮುಂದೂಡುವುದು ಒಳಿತು.
ಕೊಪ್ಪಳ                                                                                                                 -ಬಸವರಾಜ ಆಕಳವಾಡಿ

ವಿಳಾಸ :
ಬಸವರಾಜ ಆಕಳವಾಡಿ
‘ಸಿರಿಗಂಧ’
ವರ್ಣೇಕರ್ ಬಡಾವಣೆ
ಎಸ್.ವಿ.ಎಂ ಶಾಲೆ ಹಿಂಭಾಗ
ಕೊಪ್ಪಳ -೫೮೩೨೩೧
ಮೊ : ೯೪೮೧೩೪೭೩೦೬

Monday, 27 November 2017

ರಾಜ್ಯದ ಮೊದಲ ಸಾಹಿತಿಗಳ ಸಹಕಾರ ಸಂಘ

          ಪುಸ್ತಕ ಪ್ರಕಟಣೆ/ ಸಾಹಿತಿಗಳಿಗೆ ಆರ್ಥಿಕನೆರವು/  ಸಾಹಿತ್ಯ ಚಟುವಟಿಕೆಗಳಿಗೆ ಒತ್ತು/ ಕ್ಷೇಮನಿಧಿ ಸ್ಥಾಪನೆ.

          





   - ಬಸವರಾಜ ಆಕಳವಾಡಿ  





             ಸಾಹಿತ್ಯಕ್ಷೇತ್ರದಲ್ಲಿ ಇಂದು ಪುಸ್ತಕ ಪ್ರಕಟಣೆ ಹಾಗೂ ಮಾರಾಟ ವ್ಯವಸ್ಥೆ ಬಹುದೊಡ್ಡ ಸಮಸ್ಯೆಯಾಗಿದೆ. ಲೇಖಕರೆ ಹಣ ಹಾಕಿ ಪ್ರಕಟಿಸಿದ ಪುಸ್ತಕ ಮಾರುಕಟ್ಟೆಯಲ್ಲಿ ಹಣ ತಾರದೇ ಲೇಖಕ ತೊಂದರೆಗೆ ಒಳಗಾಗುತ್ತಿದ್ದಾನೆ. ತಾನು ಬರೆದ ಪುಸ್ತಕವನ್ನು ಯಾವುದೇ ಪ್ರಕಾಶನ ಸಂಸ್ಥೆಗೆ ವಹಿಸೋಣವೆಂದರೆ ಲೇಖಕನಿಗೆ ಸರಿಯಾದ ಗೌರವಧನ ನೀಡದೇ ಶೋಷಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತದೆ.. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಬರಹಗಾರರೇ ಒಗ್ಗೂಡಿ ತಮ್ಮ ಪುಸ್ತಕ ಪ್ರಕಟಣೆ, ಮಾರಾಟ ಮಾಡುವ ವ್ಯವಸ್ಥೆ ಕೈಕೊಂಡರೆ ಹೇಗಿರುತ್ತದೆ ಎಂದು ಕೊಂಡರೆ? ಅನ್ನುವುದೇನು ಬಂತು, ಇಂತಹದೊಂದು ಪ್ರಯತ್ನ ಕೊಪ್ಪಳ ಜಿಲ್ಲೆಯಲ್ಲಿ ಕೈಗೂಡಿದೆ. ಸಾಹಿತಿ, ಬರಹಗಾರರು ಸೇರಿ ‘ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ’ ಸ್ಥಾಪಿಸಿದ್ದಾರೆ.

          ಸಾಹಿತ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿಯೇ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಸ್ತಿತ್ವದಲ್ಲಿದೆ. ಹಿಂದೆ ಸಾಹಿತಿಗಳಿಗೆ ಮೀಸಲಾಗಿದ್ದ ಸಂಸ್ಥೆ ಇಂದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಮಾರ್ಪಾಟು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಪರಿಷತ್ತಿನ ಉನ್ನತ ಹುದ್ದೆ ಅಲಂಕರಿಸಲು ಸಾಹಿತ್ಯೇತರ ವ್ಯಕ್ತಿಗಳು ದೌಡಾಯಿಸುತ್ತಿರುವುದರಿಂದ ಪರಿಷತ್ತಿನ ಮೂಲ ಉದ್ದೇಶಗಳು ಅರ್ಥ ಕಳೆದುಕೊಳ್ಳಬಹುದೆಂಬ ಅನುಮಾನ ದಟ್ಟವಾಗುತ್ತಿದೆ. ಈ ಸಂಧಿಕಾಲದಲ್ಲಿ ಸಾಹಿತಿ, ಬರಹಗಾರರು ಸೇರಿ ಸಾಹಿತ್ಯ ಚಟುವಟಿಕೆಗಳಿಗಾಗಿ ಸಹಕಾರ ಸಂಘ ಸ್ಥಾಪಿಸಿರುವುದು ಸ್ವಾಗತಾರ್ಹ ಮತ್ತು ಅನುಕರಣೀಯ ಕೂಡ.

ರಾಜ್ಯದ ಮೊದಲ ಸಹಕಾರ ಸಂಘ :
        ಪುಸ್ತಕ ಪ್ರಕಟಣೆ ಪವಿತ್ರ ಕಾರ್ಯವನ್ನು ಪ್ರಕಾಶನ ಸಂಸ್ಥೆಗಳು ವ್ಯಾಪಾರಿಕರಣದ ಸರಕಾಗಿಸಿಕೊಂಡಿವೆ. ಕೆಲ ಪ್ರಕಾಶನ ಸಂಸ್ಥೆಗಳು ಲೇಖಕರಿಗೆ ಅಲ್ಪ ಗೌರವ ಸಂಭಾವನೆ ನೀಡುವುದು. ಇಲ್ಲ ಗೌರವ ಸಂಭಾವನೆ ರೂಪದಲ್ಲಿ ಅವರದೇ ಪ್ರಕಟಿತ ಪುಸ್ತಕದ 25, 30 ಅಥವಾ 50 ಪ್ರತಿಗಳನ್ನು ನೀಡಿ ಲೇಖಕರನ್ನು ಸಂಪ್ರೀತರನ್ನಾಗಿಸಲಾಗುತ್ತಿದೆ. ಪುಸ್ತಕ ಮರು ಮುದ್ರಣಗೊಂಡರೆ ಕೆಲ ಪ್ರಕಾಶನ ಸಂಸ್ಥೆಗಳು ಲೇಖಕನಿಗೆ ಗೌರಸಂಭಾವನೆ ನೀಡುವುದಿರಲಿ, ಕಾನೂನಿನ್ವಯ ಲೇಖಕನ ಅನುಮತಿ ಪಡೆಯದಿರುವುದು ಕಳವಳಕಾರಿಯಾಗಿದೆ. ಇಂತಹ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಕೊಪ್ಪಳ ಜಿಲ್ಲೆಯ ಸಮಾನ ಮನಸ್ಕ ಸಾಹಿತಿ, ಲೇಖಕರು ಒಂದೆಡೆ ಸೇರಿ ಪುಸ್ತಕ ಪ್ರಕಟಣೆ, ಪುಸ್ತಕ ಪ್ರಕಟಿಸಲು ಮುಂದಾದ ಆರ್ಥಿಕತೊಂದರೆಯಲ್ಲಿರುವ ಲೇಖಕರಿಗೆ ಹಣಕಾಸಿನ ನೆರವು ಒದಗಿಸುವುದು. ಅಲ್ಲದೆ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಕಾರ್ಯಗಳು ಸೇರಿದಂತೆ ಸಾಹಿತಿಗಳಿಗೆ ನೆರವು ಕಲ್ಪಿಸುವ ಒಮ್ಮತದ ನಿರ್ಣಯ ಕೈಕೊಳ್ಳಲಾಯಿತು. ಸಹಕಾರ ಸಂಘಗಳ ಉಪನಿಬಂಧಕರ ಸೂಚನೆಯಂತೆ ಸಂಘದ ನೀತಿ, ನಿರೂಪಣೆಗಳ ಬೈಲಾ ಕರಡು ತಯಾರಿಸಿ ಸಲ್ಲಿಸಿದ್ದರ ಅನುಗುಣವಾಗಿ ರಾಜ್ಯದಲ್ಲಿ ಮೊಟ್ಟ ಮೊದಲ ಸಾಹಿತಿಗಳ ಸಹಕಾರ ಸಂಘ 2015ರ ಆಗಸ್ಟ್ 24 ರಂದು ಅಸ್ತಿತ್ವಕ್ಕೆ ಬಂದಿದೆ.

 ಸದಸ್ಯತ್ವ ಅರ್ಹತೆ :
ಈ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆಯ ಬಯಸುವವರು ಕನಿಷ್ಟ ಒಂದು ಸಾಹಿತ್ಯ ಕೃತಿಯನ್ನು ಪ್ರಕಟಿಸಿರಬೇಕು ಅಥವಾ ಅನುವಾದಿತ ಇಲ್ಲವೆ ಸಂಪಾದಿತ ಕೃತಿ ಪ್ರಕಟಿಸಿರಬೇಕು. ಇಲ್ಲವೆ ಪತ್ರಿಕೆಯಲ್ಲಿ ಪ್ರಕಟವಾದ ಕಥೆ, ಕಾವ್ಯ, ವಿಡಂಬನೆ, ವಿಮರ್ಶೆ, ವಿಶೇಷ ಲೇಖನಗಳ ಹತ್ತು ಪ್ರತಿಗಳನ್ನು ಅರ್ಜಿಯ ಜೊತೆಗೆ ಸಲ್ಲಿಸಿ ಸದಸ್ಯರಾಗಬಹುದು. ವ್ಯಾಪ್ತಿ ಜಿಲ್ಲೆಗೆ ಮಾತ್ರ ಸೀಮಿತವಾಗಿರುತ್ತದೆ. ಸಂಘವು ಸದ್ಯ 140 ಜನ ಸದಸ್ಯರನ್ನು ಹೊಂದಿದ್ದು, 2 ಲಕ್ಷ 5 ಸಾವಿರ ರೂ. ಗಳ ಷೇರು ಬಂಡವಾಳ ಹೊಂದಿದೆ.

ವ್ಯಾಪ್ತಿ, ಉದ್ದೇಶಗಳು :
             ಸಂಸ್ಥೆಯ ಮೂಲಕ ಪುಸ್ತಕ ಪ್ರಕಟಣೆ ಮತ್ತು ಪುಸ್ತಕ ಪ್ರಕಟಣೆಗೆ ಆರ್ಥಿಕ ನೆರವು ಒದಗಿಸುವುದು. ಯುವ ಬರಹಗಾರರಿಗೆ ಸಾಹಿತ್ಯ ಶಿಬಿರ, ಕಾವ್ಯಗೋಷ್ಠಿ ಕಮ್ಮಟಗಳನ್ನು ಏರ್ಪಡಿಸುವುದು. ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆ ಏರ್ಪಡಿಸುವುದು. ಸಂಸ್ಥೆಯ ವೆಬ್‍ಸೈಟ್ ತೆರೆದು ಸದಸ್ಯ ಸಾಹಿತಿಗಳ ಮತ್ತವರ ಗ್ರಂಥ ಪರಿಚಯ ದಾಖಲಿಸುವುದು. ಜಾತ್ರೆ, ಉತ್ಸವಗಳಲ್ಲಿ ಸಂಸ್ಥೆ ಪ್ರಕಟಸಿದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಸುವುದು. ಸಂಸ್ಥೆಯು ಪೂರ್ಣ ಪ್ರಮಾಣದ ಬ್ಯಾಂಕ್ ಆಗಿದ್ದು, ಸದಸ್ಯರು ಸೇರಿದಂತೆ ಇತರರು ಇಲ್ಲಿ ಉಳಿತಾಯ ಖಾತೆ ತೆರೆದು, ಠೇವಣಿ ಇಟ್ಟು ಹಣಕಾಸಿನ ವ್ಯವಹಾರ ಕೂಡ ನಡೆಸಬಹುದಾಗಿದೆ. 

ಸಾಹಿತಿ ಕ್ಷೇಮ ನಿಧಿ :
ಸಂಘದ ಸದಸ್ಯರಾಗಿರುವ ಸಾಹಿತಿ, ಲೇಖಕರು ಅಪಘಾತ, ವಾಸಿಯಾಗದ ಖಾಯಿಲೆ, ತೀವ್ರತರ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಲ್ಲಿ ಅಂತಹವರಿಗೆ ನೆರವು  ನೀಡಲು ಸಾಹಿತಿಗಳ ಕ್ಷೇಮನಿಧಿ ಸ್ಥಾಪಿಸಲಾಗಿದೆ. ಸದಸ್ಯರು ಯಾವುದೇ ಕಾರಣದಿಂದ ಸಾವನ್ನಪಿದ ಸಂದರ್ಭದಲ್ಲಿ ಅವರ ಕುಟುಂಬದವರು ಆರ್ಥಿಕ ತೊಂದರೆಯಲ್ಲಿದ್ದರೆ ಅವರ ಅಂತ್ಯಸಂಸ್ಕಾರಕ್ಕೆ ನೆರವು ನೀಡಲು ‘ಆಪತ್ ನಿಧಿ’ ಸ್ಥಾಪಿಸಿದೆ.

ಅವಿರೋಧ ಆಯ್ಕೆ :
ಸಂಘ ನೋದಣಿಯಾಗುತ್ತಿದ್ದಂತೆ ಸಹಕಾರ ಸಂಘಗಳ ಚುನಾವಣಾ ಆಯುಕ್ತರು ಸಂಘದ ಪದಾಧಿಕಾರಿಗಳ ಆಯ್ಕೆ ಸಂಬಂಧ ಚುನಾವಣೆ ಘೋಷಿಸಿ, ಚುನಾವಣಾಧಿಕಾರಿಯನ್ನು ನೇಮಿಸಿದರು. ಚುನಾವಣಿಯಲ್ಲಿ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ ಸಂಘದ ಪರಿಕಲ್ಪನೆಯನ್ನು ಕಾರ್ಯ ರೂಪಕ್ಕಿಳಿಸಿದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಸವರಾಜ ಆಕಳವಾಡಿ ಅವರು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಜಿಲ್ಲೆಯ ನಾಲ್ಕೂ ತಾಲೂಕುಗಳ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಎಚ್. ಎಸ್. ಪಾಟೀಲ, ಡಾ. ಪಾರ್ವತಿ ಪೂಜಾರ, ಈಶ್ವರ ಹತ್ತಿ, ಡಾ. ಹನುಮಾಕ್ಷಿ ಗೋಗಿ, ವೈ.ಬಿ.ಜೂಡಿ, ಡಾ. ಬಸವರಾಜ ಪೂಜಾರ, ಡಾ. ಶರಣಬಸಪ್ಪ ಕೋಲ್ಕಾರ, ರಮೇಶ ಗಬ್ಬೂರ, ಡಾ. ಮುಮ್ತಾಜ್ ಬೇಗಂ, ಮುನಿಯಪ್ಪ ಹುಬ್ಬಳ್ಳಿ, ಡಾ.ಕೆ.ಬಿ.ಬ್ಯಾಳಿ, ಚಂದಪ್ಪ ಹಕ್ಕಿ ಮತ್ತು ನಿಂಗಪ್ಪ ಸಜ್ಜನ ಅವರುಗಳು ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ  ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಹದಿನೈದು ಜನ ಆಡಳಿತ ಮಂಡಳಿ ಸದಸ್ಯರಿದ್ದು, ಆ ಪೈಕಿ ಪ.ಜಾ ಪ.ಪಂ ಕ್ಕೆ ಸೇರಿದ ಒಬ್ಬರು, ಹಿಂದುಳಿದ ವರ್ಗಕ್ಕೆ ಸೇರಿದ ಇಬ್ಬರು ಹಾಗೂ ಇಬ್ಬರು ಮಹಿಳಾ ಸದಸ್ಯರು ಕಾನೂನು ಬದ್ಧವಾಗಿ ಆಯ್ಕೆಗೊಂಡಿರುತ್ತಾರೆ. ಇನ್ನುಳಿದ ಸದಸ್ಯರು ಸಾಮಾನ್ಯ ವರ್ಗ ಪ್ರತಿನಿಧಿಸುತ್ತಾರೆ. 

ರೈತರ ಆತ್ಮಹತ್ಯೆ ತಡೆ :
ಈ ವರ್ಷ ರಾಜ್ಯದಲ್ಲಿ ಭೀಕರ ಬರ ತಾಂಡವಾಡುತ್ತಿದೆ. ಬರದ ಕರಿ ನೆರಳಿನಿಂದ ರೈತ ಸಮುದಾಯ ತತ್ತರಿಸಿ ಹೋಗಿದೆ. ಜೀವನ ನಿರ್ವಹಣೆ ಕಷ್ಟವಾಗಿ ರೈತರು ಸಾವಿರ ಸಂಖ್ಯೆಯಲ್ಲಿ ಸಾವಿಗೆ ಶರಣಾಗುತ್ತಿದ್ದಾರೆ. ಸಾಲ ಸೋಲಗಳಿಗೆ ಬಲಿಯಾಗಿದ್ದಾರೆ. ಬರ ನಿರ್ವಹಣೆಯಲ್ಲಿ ಸಾವೇ ಅಂತಿಮವಲ್ಲ. ಯಶಸ್ವಿ ಕೃಷಿಯಿಂದ ಬರ ನಿರ್ವಹಣೆ ಸಾಧ್ಯ ಎಂಬುದನ್ನು ರೈತ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಉದ್ಧೇಶದಿಂದ ‘ರೈತರ ಆತ್ಮಹತ್ಯೆ ತಡೆ ಮತ್ತು ಬರ ನಿರ್ವಹಣೆ’ ಕುರಿತ ಗದ್ಯ ಮತ್ತು ಪದ್ಯ ಎರಡು ಸಾಹಿತ್ಯ ಕೃತಿಗಳನ್ನು ಪ್ರಕಟಿಸಲು ಸಂಸ್ಥೆ ನಿರ್ಧರಿಸಿದೆ. ನಾಡಿನ ಹೆಸರಾಂತ ಸಾಹಿತಿ, ಬರಹಗಾರರು, ಕೃಷಿ ಹಾಗೂ ಆರ್ಥಿಕ ತಜ್ಞರು, ಕೃಷಿ ವಿಶ್ವ ವಿದ್ಯಾಲಯ ಪ್ರಾಧ್ಯಾಪಕರು, ರೈತ ಸಮುದಾಯ ಮತ್ತು ರೈತ ಮುಖಂಡರುಗಳಿಂದ ಲೇಖನ, ಕವಿತೆ ಒಳಗೊಂಡಂತೆ ಪುಸ್ತಕ ಬಿಡುಗಡೆಗೆ ಸಿದ್ಧಗೊಂಡಿದೆ.

ವಿದ್ಯಾರ್ಥಿಗಳಿಂದ ಕತೆ, ಕವನ ಸ್ಪರ್ಧೆ:
ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ಧೇಶದಿಂದ ಕಾಲೇಜು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕತೆ ಹಾಗೂ ಕವನ ಸ್ಪರ್ಧೆ ಏರ್ಪಡಿಸಿದೆ. ವಿದ್ಯಾರ್ಥಿಗಳನ್ನು ಸಾಹಿತ್ಯದ ಕಡೆಗೆ ಉತ್ತೇಜಿಸುವ ಸಲುವಾಗಿ ಏರ್ಪಡಿಸಲಾದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಆಕರ್ಷಕ ಬಹುಮಾನಗಳನ್ನು ಸಹ ಪ್ರಕಟಿಸಿದೆ.

ಸಾಹಿತ್ಯ ಸಂಚಾರ :
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಮಾಸಿಕ ಸಭೆ ಪ್ರತಿ ತಿಂಗಳು ಎರಡನೇ ಭಾನುವಾರ ಆಯೋಜನೆಗೊಂಡಿದೆ. ಸಂಘದ ಕಾರ್ಯಕಾರಿ ಮಂಡಳಿ ಸಭೆಯ ಜೊತೆಗೆ ಸದಸ್ಯ ಸಾಹಿತಿಯೊಬ್ಬರ ಕೃತಿ ಪರಿಚಯ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಪ್ರತಿ ತಿಂಗಳು ಬೇರೆ ಬೇರೆ ತಾಲೂಕುಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಅಪಾರ ಜನ ಬೆಂಬಲವೂ ವ್ಯಕ್ತವಾಗುತ್ತಿದೆ.

ಪುಸ್ತಕ ಪ್ರಕಟಣೆಗೆ ನೆರವು : 
ಸಾಹಿತ್ಯದ ಯಾವುದೇ ಪ್ರಕಾರ ಕುರಿತು ಸರ್ಕಾರ, ವಿಶ್ವ ವಿದ್ಯಾಲಯಗಳು, ಪ್ರಕಾಶನ ಸಂಸ್ಥೆಗಳು ಒಂಕ್ಕಿಂತ ಹೆಚ್ಚು ಸಂಪುಟಗಳನ್ನು ಪ್ರಕಟಿಸಿದಾಗ ಹೆಚ್ಚಿನ ಅಧ್ಯಯನಕ್ಕಾಗಿ ಸದಸ್ಯರು ಅಂತಹ ಅಮೂಲ್ಯ ಸಂಪುಟಗಳನ್ನು ಹಾಗೂ ಲೇಖನ ಸಾಮಗ್ರಿ ಖರೀದಿಸಲು ಅನುಕೂಲವಾಗುವ ದೃಷ್ಟಿಯಿಂದ ಸಂಸ್ಥೆ ರೂ. 10,000-00 ಗಳ ವರೆಗೆ ತುರ್ತು ಸಾಲ ಮಂಜೂರು ಮಾಡುವ ಯೋಜನೆ ಜಾರಿಗೊಳಿಸಿದೆ. ಆರ್ಥಿಕ ಸಂಕಷ್ಟದಲ್ಲಿ ಇರುವ ಲೇಖಕರಿಗೆ ಪುಸ್ತಕ ಪ್ರಕಟಣೆಗಾಗಿ ಸಾಲ ಸೌಲಭ್ಯ ಒದಗಿಸಲಾಗುವುದು. ಸದಸ್ಯರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ 24 ಗಂಟೆಯೊಳಗಾಗಿ ಸಾಲ ಮಂಜೂರು ಮಾಡಲಾಗುವುದು. ನಂತರ ಸಭೆಯ ಮುಂದಿಟ್ಟು ಘಟನೋತ್ತರ ಮಂಜೂರಾತಿ ಪಡೆದುಕೊಳ್ಳಲಾಗುವುದು. ಈ ಒಂದು ವರ್ಷದಲ್ಲಿ ರೂಪಾಯಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಸಾಲ ಮಂಜೂರು ಮಾಡಲಾಗಿದೆ. 

ಯಶಸ್ವಿನಿ ಯೋಜನೆ : 
ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈತ ಸಮುದಾಯಕ್ಕೆ ಆರೋಗ್ಯ ರಕ್ಷಣೆ ನೀಡುತ್ತಿರುವ ಸರ್ಕಾರದ ಮಹತ್ವಕಾಂಕ್ಷಿ ಯಶಸ್ವಿನಿ ಯೋಜನೆಯನ್ನು ಸಂಘದ ಸಾಹಿತಿ, ಬರಹಗಾರ ಸದಸ್ಯರಿಗೂ ವಿಸ್ತರಿಸಲಾಗಿದೆ. ಇದರಿಂದ ಸಾಹಿತಿಗಳು ಮೂರು ಲಕ್ಷ ರೂ.ಗಳ ವರೆಗೆ ಆರೋಗ್ಯ ವಿಮೆ ರಕ್ಷಣೆ ಪಡೆಯಬಹುದಾಗಿದೆ. ಪ್ರತಿಯೊಬ್ಬರಿಗೂ ಯಶಸ್ವಿನಿ ಕಾರ್ಡ ಹಾಗೂ ಗುರುತಿನ ಕಾರ್ಡ ನೀಡಲಾಗುವುದು.
ಸಾಹಿತಿ, ಬರಹಗಾರರ ಪುಸ್ತಕ ಪ್ರಕಟನೆಗೆ ಆರ್ಥಿಕ ನೆರವು ಕಲ್ಪಿಸುವ, ಸಂಘಟಿತ, ಗುಣಾತ್ಮಕ ಸಾಹಿತ್ಯ ಚಟುವಟಿಕೆ ಕೈಕೊಳ್ಳಲು ಹಾಗೂ ಆರ್ಥಿಕ ತೊಂದರೆಯಲ್ಲಿರುವ ಬರಹಗಾರರಿಗೆ ನೆರವು ಕಲ್ಪಿಸುವ ವಿನೂತನ ಸಂಸ್ಥೆ ಸ್ಥಾಪನೆಯಿಂದ ಸಾಹಿತ್ಯ ಬರಹಗಾರರಲ್ಲಿ ಹೊಸ ಆಸೆ ಮೂಡಿದೆ. ಸಂಘವು ಪ್ರಗತಿ ಪಥದತ್ತ ಮೂರನೇ ವರ್ಷದಲ್ಲಿ ಮುನ್ನಡೆದಿದೆ.

                                                **


ವಿಳಾಸ: ಬಸವರಾಜ ಆಕಳವಾಡಿ, ನಿವೃತ್ತ ವಾರ್ತಾಧಿಕಾರಿ, ಸಿರಿಗಂಧ,  ವರ್ಣೇಕರ ಬಡಾವಣೆ, ಸ್ವಾಮಿ ವಿವೇಕಾನಂದ ಶಾಲೆ ಹಿಂಭಾಗ ಕೊಪ್ಪಳ-583231, ಮೊ : 9481347306, e-mail: akalawadii.b@gmail.com 

Wednesday, 22 November 2017

ಗ್ರಂಥ ಸಂಪದ




           ಈ ಪುಸ್ತಕವು ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ ವಿಜೇತ ರಂಜಾನ ದರ್ಗಾ ರವರ ಇತ್ತೀಚಿನ ಕೃತಿ. ದರ್ಗಾರವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿ ಶಾಲಿ ಕವಿಗಳಲ್ಲಿ ಒಬ್ಬರು. ಸಮತಾವಾದ ಮತ್ತು ಸೂಫಿ ವಿಚಾರಗಳ ನೆಲೆಯಲ್ಲಿ ವಚನ ಚಳವಳಿಯ ತತ್ವಗಳಿಗೆ ಹೊಸ ಹೊಲವು ನೀಡುವ ಪ್ರಯತ್ನವನ್ನು ಅವರು ಮಾಡಿದ್ದಾರೆ. 
    ಬಸವಣ್ಣನವರ ಏಕದೇವೋಪಾಸನೆಯ ಧರ್ಮ ಸಂಪೂರ್ಣ ಕ್ರಾಂತಿಕಾರಿ ಧರ್ಮವಾಗಿದೆ. ಇಡೀ ಜಗತ್ತಿನಲ್ಲಿ ದೇವಸ್ಥಾನಳಿಲ್ಲದ ಧರ್ಮ ಎಂದರೆ ಲಿಂಗಾಯತ ಧರ್ಮ ಒಂದೇ ಆಗಿದೆ. ಈ ಧರ್ಮದಲ್ಲಿ ಮಾನವರೇ ಜೀವಂತ ದೇವಾಲಯಗಳಾಗಿದ್ದಾರೆ. ನಾವು ನಮ್ಮೊಳಗಿನ ದೇವರ ಜೊತೆ ಒಂದಾಗುವುದೇ ಲಿಂಗಸಾಮರಸ್ಯ. ಲಿಂಗವಂತ ಧರ್ಮದಲ್ಲಿ ಏನ್ನುಂಟು ಎನಿಲ್ಲ? ಈ ಕೃತಿಯಲ್ಲಿ ಹಲಾವಾರು ಸೂಕ್ಷ್ಮ ವಿಚಾರಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ಈ ಪುಸ್ತಕ ಲಡಾಯಿ ಪ್ರಕಾಶನ ಗದಗ ಇವರಿಂದ 2017ರ ಸಾಲಿನಲ್ಲಿ ಪ್ರಕಟಗೊಂಡಿದೆ. ಪುಟ.ಸಂ 64, ಬೆಲೆ ರೂ. 30.

Sunday, 29 October 2017

ಮನುಷ್ಯನ ಗುಣ






ಮೌನೇಶ್ ಎಸ್. ಬಡಿಗೇರ್






ತಿಪ್ಪೆ ಮೇಲೆ
ಸ್ವತಂತ್ರವಾಗಿ ಬೆಳೆವ ಸಸಿ
ಹೆಮ್ಮರವಾಗಿ ಬೆಳೆದು
ಇನ್ನೊಬ್ಬರಿಗೆ
ನೆರಳ ನೀಡಬಲ್ಲದು..!
ಉಪ್ಪರಿಗೆಯಲಿ ಅಂದಕೆ
ಹಂಗಿನಲಿ ಆರೈಕೆಯಾಗಿ













ಬೆಳೆದ ಸಸಿ
ದಾಸ್ಯದಲಿ, ರೋಷದಲಿ
ನರಳಿ ಸಾಯುವುದು..!!
ಅದು ಅಂದಕಾಗಿ, ಗರ್ವಕಾಗಿ
ಇರುವೆನೆಂದು
ಬೀಗಬಲ್ಲದೆ ಹೊರತು
ನೆರಳಾಗಿ ಬದುಕಲಾರದು..!!

Thursday, 19 October 2017

ಜನಪದ ಆಚರಣೆ : ಗ್ರಾಮೀಣರ ವಿಶಿಷ್ಟ ದೀಪಾವಳಿ

   ದೀಪಾವಳಿ ದೀಪಗಳ ಅರ್ಥತ್ ಬೆಳಕಿನ ಹಬ್ಬ. ಮನೆ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬ. ದೀಪಾವಳಿ ಹಬ್ಬವನ್ನು ನರಕಚತುರ್ದಶಿಯಿಂದ ಪ್ರಾರಂಭಿಸಿ, ಸಾಮಾನ್ಯವಾಗಿ ಮೂರು ದಿನಗಳವರೆಗೆ ಆಚರಿಸುವುದುಂಟು. ಪ್ರಾಂತಭೇದವಿಲ್ಲದೆ ಎಲ್ಲಾ ಹಿಂದೂಗಳು ಬಂಧು-ಬಾಂಧವರೊಂದಿಗೆ ಉತ್ಸಾಹದಿಂದ ಆಚರಿಸುವ ದೊಡ್ಡ ಹಬ್ಬ ‘ದೀಪಾವಳಿ’. ದೀಪಾವಳಿ ಹಬ್ಬವನ್ನು ‘ದೀವಳಿಗೆ’ ಹಾಗೂ ‘ಹಟ್ಟಿ ಹಬ್ಬ’ ವೆಂತಲೂ ಕರೆಯುತ್ತಾರೆ. ನಗರ -ಪಟ್ಟಣಗಳಲ್ಲಿ ದೀಪಾವಳಿ ಎಂದೊಡನೆ ದೀಪಗಳನ್ನು ಹಚ್ಚಿ ಮನೆಯ ಮುಂದಿನ ಅಂಗಳವನ್ನು ಸಿಂಗರಿಸುವುದರ ಜೊತೆಗೆ ಪಟಾಕಿ ಸಿಡಿಸಿ ಸಿಡಿಮದ್ದು ಸಿಡಿಸುವುದು ಹಬ್ಬದ ಪ್ರಮುಖ ಆಚರಣೆಯಾಗಿ ಕಂಡು ಬರುತ್ತದೆ. ಆದರೆ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲಿ ್ಲ ದೀಪಾವಳಿ ಹಬ್ಬದ ಆಚರಣೆಯ ಸ್ವರೂಪ ಕೊಂಚ ಭಿನ್ನವಾಗಿಯೇ ಇದೆ. ದೀಪಾವಳಿ ಹಬ್ಬವನ್ನ್ಬು- ಹಟ್ಟಿ ಹಬ್ಬವೆಂತಲೂ ಕರೆಯುತ್ತಾರೆ. ಮುಂಗಾರು ಮಳೆ ಮುಗಿದು ಹಿಂಗಾರು ಪ್ರಾಂಭವಾಗುವ ಸಂಧಿಕಾಲದಲ್ಲಿ ್ಲ ಹಟ್ಟಿಹಬ್ಬ ಬರುವುದು.
   ಹಬ್ಬದ ಸಂಪ್ರಾದಾಯಗಳು ಋತುಮಾನಕ್ಕನುಸಾರವಾಗಿ ನಮ್ಮ ಜನಾಂಗದಲ್ಲಿ ಬೆಳೆದು ಬಂದಿದೆ. ಕೆಲವು ಸಂಪ್ರದಾಯಗಳನ್ನು ಮಳೆಗಾಲದಲ್ಲಿಯೂ, ಕೆಲವನ್ನು ಚಳಿಗಾಲದಲ್ಲಿಯೂ, ಉಳಿದವುಗಳನ್ನು ಬೇಸಿಗೆಯಲ್ಲಿಯೂ ಜನರು ಆಚರಿಸುತ್ತಾರೆ. ವಿಶೇಷವಾಗಿ ಮಳೆಗಾಲದಲ್ಲಿ ಮಣ್ಣು ಪೂಜೆಗೆ ಸಂಬಂಧಿಸಿದ ಎಲ್ಲ ಸಂಪ್ರದಾಯಳನ್ನು, ಹಗಲು ಇರುಳೆನ್ನದೆ,ದಣಿವಿಲ್ಲದೆ ದುಡಿಮೆಯಲ್ಲಿ ತೊಡಗಿರುವ ಮೂಕ ಬಸವಣ್ಣನಿಗೆ, ಜೀವ ಕೋಟಿಯ ತೃಷೆ ಹಿಂಗಿಸುವ ಜೀವ ಜಲ ಕೊಡುವ ಮಳೆರಾಯನಿಗೆ, ಎಳ್ಳು-ಜೀರಿಗೆ ಮೊದಲ್ಗೊಂಡು ಬೆಳೆದು ಸಕಲ ಜೀವರಾಶಿಗೆ ಪಶು ಹಾಗೂ ಕೃಷಿ ಸಂಪತ್ತು ವೃದ್ಧಿಗಾಗಿ ಆಚರಿಸುವ ಹಲವಾರು ಸಂಪ್ರದಾಯಗಳೇ ಹಬ್ಬಗಳಾಗಿ ಮಾರ್ಪಾಟುಗೊಂಡಿರಬೇಕು.                                                                                         
ಇಡಿ ದೇಶಾದ್ಯಂತ ಜನರು ಸಂಭ್ರಮ-ಸಡಗರದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದರೆ ಉತ್ತರ ಕರ್ನಾಟಕದ ರೈತರು ಮನೆ ಮನೆಗಳಲ್ಲಿ ಪಶು ಸಂಪತ್ತು ವೃದ್ಧಿಗಾಗಿ ದೀಪಾವಳಿ ಸಂದರ್ಭದಲ್ಲಿ ಸಾಕು ಪ್ರಾಣಿಗಳಾದ ಆಕಳು, ಕುರಿ, ಆಡು, ಎತ್ತು ಮುಂತಾದ ಪ್ರಾಣಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಮನ ಸಲ್ಲಿಸುವುದು ಬೆಳೆದು ಬಂದಿದೆ. ಹಬ್ಬದ ಆಚರಣೆಯೂ ಬಹು ವಿಶಿಷ್ಟವಾಗಿದೆ. ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರು ದೀಪಾವಳಿ ಸಂದರ್ಭದಲ್ಲಿ ಆದ್ಧೂರಿಯಾಗಿ ಲಕ್ಷ್ಮೀ ಪೂಜೆ ನೆರವೇರಿಸುತ್ತಾರೆ. ಅದೇ ರೀತಿ ರೈತರ ಮನೆಗಳಲ್ಲಿ ನಡೆಯುವ ಲಕ್ಷ್ಮೀ ವೃದ್ಧಿಯಾಗಲು ಹಟ್ಟಿಯಲ್ಲಿರುವ ದನಕರು, ಕುರಿ-ಆಡು, ಎತ್ತುಗಳಿಗೂ ಅಂದು ಪೂಜೆ ಸಲ್ಲಿಸಲಾಗುತ್ತಿದೆ.

ಲಕ್ಷ್ಮೀ ಪೂಜೆ:

   ಹಬ್ಬದ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ. ಸಮುದಾಯದಿಂದ ಸಮುದಾಯಕ್ಕೆ ಬೇರೆಯಾಗಿದೆ. ಗ್ರಾಮೀಣ ಪ್ರದೇಶದ ರೈತರ ಮನೆಗಳಲ್ಲಿ ಲಕ್ಷ್ಮೀ ಪೂಜೆಯ ಆಚರಣೆ ವಿಶಿಷ್ಟವಾಗಿದೆ. ರೈತರ ಮನೆಗಳಲ್ಲಿ ದೀಪಾವಳಿ ಅಮವಾಸ್ಯೆಯ ದಿನ ರಾತ್ರಿ ಲಕ್ಷ್ಮೀಗೆ ವಿಶೇಷ ಪೂಜೆ ನೆರವೇರುತ್ತದೆ. ಅಂದು ಮನೆಯ ಲಕ್ಷ್ಮೀಗೆ ಪೂಜೆಗಾಗಿ ಹೊಸ ಸೀರೆಯನ್ನು ಕರಿ ಮೇಲೆ ಬರುವಂತೆ ಘಳಗಿ ಮಾಡಿ, ಬಂಗಾರದ ದಾಗೀನು, ನತ್ತುಗಳಿಂದ ಶೃಂಗರಿಸುವರು. ಅದಕ್ಕೆ ಲಕ್ಷ್ಮೀಯೆಂದು ಭಾವಿಸಿ ಪೂಜಿಸುವರು. ವಿಭೂತಿ, ಕುಂಕುಮಾರ್ಚನೆ ಮಾಡಿ ಸಜ್ಜಕದ ಹೋಳಿಗೆಯ ನೈವೇದ್ಯ ಹಿಡಿಯುವರು. ಕರ್ಪೂರದ ಆರತಿ ಎತ್ತಿ ಕಾಯಿ ಒಡೆದು ಭಕ್ತಿ ಪೂರ್ವಕವಾಗಿ ನಮಿಸುವರು. ಈ ರೀತಿಯಾಗಿ ಲಕ್ಷ್ಮೀಗೆ ಪೂಜೆ ಸಲ್ಲಿಸಲಾಗುವುದು. ಈ ಹಬ್ಬದಲ್ಲಿ ಲಕ್ಷ್ಮೀಗೆ ಪೂಜೆ ಸಲ್ಲಿಸುವ ಸಲುವಾಗಿ ಕಡ್ಡಾಯವಾಗಿ ಹೊಸ ಸೀರೆ ತಂದು ದೇವರಿಗೆ (ಲಕ್ಷ್ಮೀ)ಗೆ ಸಲ್ಲಿಸುವುದು ವಾಡಿಕೆ.

ಹಟ್ಟಿ ಪೂಜೆ:

ದನಗಳು ಹಾಗೂ ಕುರಿ ಮಂದೆಯ ಹಟ್ಟಿಯಲ್ಲಿ ಲಕ್ಚ್ಮೀಗೆ ವಿಶೇಷವಾಗಿ ಪೂಜೆ ಸಲ್ಲಿಸುವುದಿದೆ. ಹಟ್ಟಿ (ದಡ್ಡಿ)ಯ ಮಧ್ಯದಲ್ಲಿ ಬನ್ನಿ ಗಿಡದ ಟೊಂಗೆಯನ್ನು ಕಡಿದು ತಂದು ನಿಲ್ಲಿಸುತ್ತಾರೆ. ನೆಟ್ಟ ಬನ್ನಿ ಗಿಡದ ಕೆಳಗೆ ಅಮಾವಾಸ್ಯೆಯ ನೀರವ ಕತ್ತಲಲ್ಲಿ ಹಣತೆಯ ಮಂದ ಬೆಳಕಿನಲ್ಲಿ ಹಟ್ಟಿಯಲ್ಲಿ ಲಕ್ಚ್ಮೀ ಪೂಜೆ ಕೈಗೊಳ್ಳಲಾಗುವುದು. ಬನ್ನಿ ಗಿಡದಲ್ಲಿ ಲಕ್ಚ್ಮೀ ನೆಲೆಸಿರುವಳೆಂಬ ನಂಬಿಕೆಯೇ ಬನ್ನಿ ಗಿಡ ಕಡಿದು ತಂದು ಪೂಜಿಸುವುದಕ್ಕೆ ಕಾರಣವಾಗಿರಬಹುದು. ದೇವರಿಗೆ ನೈವೇದ್ಯ ಸಲ್ಲಿಸಿಯಾದ ಮೇಲೆ, ದೇವರ ಎಡೆಯನ್ನು ಪ್ರಸಾದವೆಂದು ಕುಟುಂಬದ ಸದಸ್ಯರಿಗೆ ಮಾತ್ರ ಹಂಚಿ ಉಳಿದ ಪ್ರಸಾದವನ್ನು ನೆಟ್ಟ ಬನ್ನಿ ಗಿಡದ ಬುಡದಲ್ಲಿಯೇ ತಗ್ಗು ತೆಗೆದು ಮುಚ್ಚುತ್ತಾರೆ. ಹಟ್ಟಿಯಲ್ಲಿ ನಡೆಯುವ ಪೂಜೆಯಲ್ಲಿ ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಬನ್ನಿ ಗಿಡವನ್ನು ವಿವಿಧ ಹೂ ಗಳಿಂದ ಅಲಂಕರಿಸುತ್ತಾರೆ. ಲಕ್ಷ್ಮೀ ಪೂಜೆಗಾಗಿ ಮನೆ-ಮಠಗಳನ್ನು ಸಿಂಗರಿಸುವುದರಿಂದ ಈ ಹಬ್ಬ ಧಾರ್ಮಿಕ ಹಾಗೂ ಸಾಮಾಜಿಕ ಎರಡು ದೃಷ್ಟಿಯಿಂದ ಮಹತ್ವ ಪೂರ್ಣವಾಗಿದೆ.
ಕೆಲವು ಪ್ರದೇಶದ ರೈತರ ಮನೆಗಳಲ್ಲಿ ಹಟ್ಟಿಯನ್ನು ಸ್ವಚ್ಛಗೊಳಿಸಿ ನೀರು ಹೊಡೆದು ತಾವು ಸಾಕಿದ ಪ್ರಾಣಿಗಳಾದ ದನ,ಕುರಿ,ಆಡುಗಳ ಸಗಣಿ ಮತ್ತು ಹಿಕ್ಕಿಯನ್ನು ಹಟ್ಟಿಯ ಮಧ್ಯ ಒಂದೆಡೆ ರಾಶಿ ಹಾಕಿ ರಾಶಿಯ ಮೇಲೆ ಬನ್ನಿ ಗಿಡದ ಟೊಂಗೆ ಮತ್ತು ಉತ್ತರಾಣಿ ಕಡ್ಡಿಯನ್ನು ಚುಚ್ಚಿ ಹೂವಿನಿಂದ ಅಲಂಕರಿಸಲಾಗುತ್ತದೆ. ಸಗಣಿ ರಾಶಿಯ ಮುಂದೆ  ಕಂಬಳಿಯನ್ನು ಹಾಸಿ ಅದರ ಮೆಲೆ ದಿನ ಬಳಕೆಯ ಕೃಷಿ ವಸ್ತು, ಉಪಕರಣಗಳನ್ನು ತಂದಿಟ್ಟು ಅವುಗಳ ಮೇಲೆ ಮೀಸಲು ನೀರು ಚಿಮುಕಿಸಿ  ವಿಭೂತಿ, ಕುಂಕುಮ, ಬಂಡಾರಗಳನ್ನು ಹಚ್ಚಿ ಪೂಜೆ ಸಲ್ಲಿಸಿತ್ತಾರೆ. ಹೋಳಿಗೆಯ ನೈವದ್ಯ ಅರ್ಪಿಸಿ ಕಾಯಿ ಒಡೆಯುತ್ತಾರೆ. ಬಳಿಕ ತಮ್ಮ ಮನೆಯ ಪಶು ಸಂಪತ್ತಿಗೆ ಕುಂಕುಮ ಹಚ್ಚಿ ಆರತಿ ಮಾಡುತ್ತಾರೆ. ಹೀಗೆ ಹಬ್ಬದ ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವುದು ಕಂಡು ಬರುತ್ತದೆ.

ಬೆಚ್ಚಹಾಯಿಸುವುದು:

    ಮಾರನೆಯ ದಿನ ಬಲಿಪಾಡ್ಯಮಿ. ಬಲಿಪಾಡ್ಯಮಿಯ ದಿನ ನಸುಕಿನಲ್ಲಿಯೇ ಎದ್ದು ಸ್ನಾನಾದಿಗಳನ್ನು ಮುಗಿಸಿ, ಹಸು-ಕರು, ಕುರಿ-ಮೇಕೆಗಳನ್ನು ಬೆಚ್ಚಹಾಯಿಸುವುದಕ್ಕೆ ತಯಾರಿ ನಡೆಸುವರು. ದನ-ಕರು, ಕುರಿ-ಮೇಕೆಗಳನ್ನು ಹಟ್ಟಿಯ ಬಾಗಿಲಲ್ಲಿ ತಯಾರಿಸಿದ ಬೆಚ್ಚದಲ್ಲಿ ಹಾಯಿಸುವ ಪದ್ಧತಿ ಈಗಲೂ ರೂಢಿಯಲ್ಲಿದೆ. ದಕ್ಷಿಣ ಕರ್ನಾಟಕದಲ್ಲಿ ಎತ್ತುಗಳಿಗೆ ಮಾತ್ರ ಸಂಕ್ರಾತಿ ಸಮಯದಲ್ಲಿ ಕಿಚ್ಚು ಹಾಯಿಸುತ್ತಾರೆ. ಬಯಲು ನಾಡಿನಲ್ಲಿ ಮುಂಬರುವ ಚಳಿಯನ್ನು ಎದುರಿಸಲು ವನವಾಸದೊಳಗಿರುವ ಪಾಂಡವರ ಚಳಿಯನ್ನು ತಡೆಯುವ ಸಾಮಥ್ರ್ಯ ದನ-ಕರುಗಳಿಗೂ ಬರಲೆಂದು ಹಟ್ಟಿಯ ಬಾಗಿಲ ಮುಂದೆ ಮೇವಿನ ಸೊಪ್ಪೆಯ ಕಿಚ್ಚು ಮಾಡುವರು. ಅದರಲ್ಲಿ ತುರುಬಿ,ತುಂಬಿ, ಗಣಜಲಿ, ಹೆಬ್ಬೇವು ಮೊದಲಾದ ಧಾರ್ಮಿಕ ಹಾಗೂ ಔಷಧಿ ಮಹತ್ವ ಪಡೆದ ಸಸ್ಯಗಳ ಎಲೆಗಳನ್ನು ಹಾಗೂ ಲೋಬಾನ ಹಾಕುವರು. ಹಟ್ಟಿಯ ತುಂಬ ಸುವಾಸನೆಯುಕ್ತ ಹೊಗೆ ಆವರಿಸುತ್ತಿದ್ದಂತೆ ಹಟ್ಟಿಯಲ್ಲಿರುವ ದನ-ಕರು, ಕುರಿ-ಮೇಕೆಗಳನ್ನು ತಂದು ಕಿಚ್ಚಿಗೆ ಹಾಯಿಸುವರು.
    ಪಾಂಡವರು ಮನೆಯನ್ನು ಸೇರುವ ಆ ದಿವಸದಲ್ಲಿ ಬೆಚ್ಚದ ಹೊಗೆಯೂ ಹಾಗೂ ಜಳವು ದನಕರು ಕುರಿಮರಿಗಳಿಗೆ ತಾಗಿದರೆ ಚಳಿಯು ಹತ್ತುವುದಿಲ್ಲವೆಂಬ ನಂಬಿಕೆ ರೈತರಲ್ಲಿ ಬೆಳೆದು ಬಂದಿದೆ. ಲಕ್ಷ್ಮೀ ಪೂಜೆಗೆ ಹಿಂದಿನ ದಿನವೇ ಸಿಂಗರಿಸಿದ ಹಟ್ಟಿಯ ದನಕರುಗಳನ್ನು ಕಿಚ್ಚು ಹಾಯಿಸುವಾಗಿನ ಸಡಗರದಲ್ಲಿ ಮನೆ-ಮಂದಿಯೆಲ್ಲರೂ ಪಾಲ್ಗೊಳ್ಳುವರು. ಮನೆಯ ಹೆಣ್ಣುಮಗಳು ಹಟ್ಟಿಯ ಬಾಗಿಲಿನಲ್ಲಿ ಹಾಕಿದ ಕಿಚ್ಚು ಹಾಯ್ದು ಹೊರಬರುವ ಮೊದಲ ಹಸು, ಕರು, ಕುರಿ, ಮರಿ, ಮೇಕೆಗೆ ಆರತಿ ಬೆಳಗಿ ಕುಂಕುಮ ಹಚ್ಚುವಳು. ಹೀಗೆ ಯಾವ ದನ, ಕರು, ಕುರಿ, ಮರಿ, ಮೇಕೆಗೆ ಕುಂಕುಮ ಹಚ್ಚಲಾಗುವುದೋ ಅದನ್ನು ಆ ಹೆಣ್ಣುಮಗಳಿಗೇ ಬಳುವಳಿಯಾಗಿ ಕೊಡುವ ಸಂಪ್ರದಾಯ ಇದೆ.

ಪಾಂಡವರ ಪೂಜೆ:

ಪಾಡ್ಯಮಿಯ ದಿನ ಬೆಳಿಗ್ಗೆ ದನ ಕರುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮ ಮುಗಿದ ನಂತರ ಗೃಹಣಿಯರು ಆಕಳ ಸಗಣಿಯಲ್ಲಿ ಪಾಂಡ್ರವ್ವ (ಪಾಂಡವ)ರನ್ನು ತಯಾರಿಸುತ್ತಾರೆ. ಐದು ಮೂರ್ತಿಗಳನ್ನು ವೃತ್ತಾಕಾರದಲ್ಲಿ ಕೂಡ್ರಿಸಿ, ಮಧ್ಯೆ ಭೂದೇವಿಯನ್ನು ಕೂಡ್ರಿಸುವರು. ತಲೆಯ ಮೇಲೆ ಅವರಿ ಹೂವು, ಇಲ್ಲವೆ ಚಂಡು ಹೂವು ಮತ್ತು ಉತ್ತಾರಾಣಿ ಕಡ್ಡಿಯನ್ನು ಚುಚ್ಚುವರು. ವೃತ್ತಾಕಾರದಲ್ಲಿ ಹಂಗ ನೂಲನ್ನು ಸುತ್ತು ಹಾಕಿ ಅರಿಷಿನ, ಕುಂಕುಮದ ಬೊಟ್ಟು ಇಡುವರು. ಮನೆಯ ಜಗಲಿಯಲ್ಲಿ ಕೂಡ್ರಿಸಿದ ಪಾಂಡವರಿಗೆ ಶ್ಯಾವಿಗೆ, ಬೆಲ್ಲ, ಹಾಲು, ತುಪ್ಪದ ನೈವೇದ್ಯ ಹಿಡಿಯುವರು. ಪಾಂಡವರು ದಕ್ಷಿಣದಿಂದ ಉತ್ತರ ದಿಕ್ಕಿಗೆ ತೆರಳಿದ ನೆನಪಿಗಾಗಿ ರೈತರಲ್ಲಿ ಪಾಂಡವರ ಪೂಜೆ ಬೆಳೆದು ಬಂದಿದೆ ಎಂದು ನಂಬಲಾಗಿದೆ.

ಅಣೀ-ಪೀಣಿ ಸಂಪ್ರದಾಯ:

ಉತ್ತರ ಕರ್ನಾಟಕದಲ್ಲಿ ದೀಪಾವಳಿ ಹಬ್ಬದ ಸಂರ್ಭದಲ್ಲಿ ದನ-ಕರುಗಳಿಗೆ ಬರುವ ಪೀಡೆ ದೂರಾಗಲಿ ಎಂದು ಆಶಿಸಿ ದೀಪ ಬೆಳಗುವುದೇ ‘ಆಣೀ-ಪೀಣಿ’ ಸಂಪ್ರದಾಯವಾಗಿದೆ. ಈ ಸಂದರ್ಭದಲ್ಲಿ ಹೇಳುವ ಆಣೀ-ಪೀಣಿ ಹಾಡುಗಳು “ಪಶು ಸಂಪತ್ತು ಹೆಚ್ಚಲಿ. ಅವು ಆರೋಗ್ಯದಿಂದ ಬಾಳಲಿ” ಎಂಬ ಸಂದೇಶ ಹೊಂದಿದೆ. ಈ ಸಂಪ್ರದಾಯ ಆಚರಣೆ ಮಲೆನಾಡಿನ ಅಂಟಿಕೆ-ಪಂಟಿಕೆ ಸಂಪ್ರದಾಯಕ್ಕಿಂತ ಭಿನ್ನವಾಗಿದೆ. ದನಕಾಯುವ ಅಥವಾ ಕುರಿಕಾಯುವ ಹುಡುಗರು ಈ ಸಂದರ್ಭದಲ್ಲಿ ಹಳ್ಳದ ದಂಡೆಯಲ್ಲಿ ಬೆಳೆದ ‘ಜೇಕು’ ಅಥವಾ ‘ಆಪು’ ವಿನಿಂದ ಅತ್ಯಂತ ಸುಂದರವಾಗಿ ಐದ್ಹೆಡೆ ನಾಗರ ಆಕಾರದಲ್ಲಿ ಹೆಣೆದು ಮಾಡಿದ ಗೂಡಿನಲ್ಲಿ ದೀಪವನ್ನು ಹಚ್ಚಿಟ್ಟುಕೊಂಡು ಮನೆ-ಮನೆಗೆ ಹೊಗಿ ಅಣೀ-ಪೀಣಿ ಹಾಡುಗಳನ್ನು ಹೇಳಿ ದನಕರುಗಳಿಗೆ ದೀಪ ಬೆಳಗುವರು.
                                                                “ ಅಣೀ-ಪೀಣಿ ಜಾಣಿಗೋ
ಎಣ್ಣೆ ರೋಟ್ಟಿ ಗಾಣಿಗೋ
ನಿಮ್ಮ ದೇವರ ಪೀಡಾ ಹೊಳ್ಯಾಚಿಕೋ
ನಿಮ್ಮ ದನಗಳ ಪೀಡಾ ಹೊಳ್ಯಾಚಿಕೋ”
ಹಟ್ಟಿಯಲ್ಲಿ ಅಥವಾ ಗ್ವಾದಲಿಯಲ್ಲಿ ಕಟ್ಟಿದ ಹಸು,ಕುರಿ,ಎತ್ತು,ಎಮ್ಮೆ,ಕರು,ಆಡುಗಳಿಗೆ ದೀಪ ಬೆಳಗಿ ಆ ಮನೆಯ ಪಶು ಸಂಪತ್ತಿಗೆ ಬರಬಹುದಾದ ಪೀಡೆಗಳು ಹೊಳೆಯಾಚೆ ದೂರಾಗಲಿ ಎಂದು ಹರಸುತ್ತಾರೆ. ಹಳ್ಳಿಗಳ ಪ್ರತಿಯೊಂದು ಮನೆಯಲ್ಲಿ ದನ ಕರುಗಳ ಮುಂದೆ ಹೋಗಿ ಹೀಗೆ ಹಾಡು ಹೇಳಿ ದೀಪ ಬೆಳಗುವ ಪದ್ಧತಿ ರೂಢಿಯಲ್ಲಿದ್ದು, ಅದು ಈಗ ಕ್ರಮೇಣ ಕ್ಷೀಣಿಸತೊಡಗಿದೆ.
ಆಧುನಿಕತೆಯ  ಅಬ್ಬರದಿಂದ ವಿದೇಶಿ ಸಂಸ್ಕøತಿ ವ್ಯಾಮೋಹದಿಂದ ನಮ್ಮತನವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ಹಬ್ಬಗಳ ಆಚರಣೆ ಹಾಗೂ ಅದರ ಬಗೆಗಿನ ನಮ್ಮ ನಿರ್ಲಿಪ್ತತೆ ಮಾನವ ಸಂಬಂಧಗಳನ್ನು ó ಕ್ಷೀಣಗೊಳಿಸುತ್ತಿದೆ. ಇಂತಹ ಸಂಧಿ ಕಾಲದಲ್ಲಿ ಹಬ್ಬಗಳ ಸಾಂಸ್ಕøತಿಕ ಪರಂಪದೆಯನ್ನು ಯುವ ಪೀಳಿಗೆಗೆ ಪುನರ್ ಮನನ ಮಾಡುವ ಅಗತ್ಯವಿದೆ.
ಸಂಬಂಧಗಳು ಬೆಳೆಯಬೇಕಾದರೆ, ಸಂಪರ್ಕ ಅಗತ್ಯ. ಆದರೆ ನಾಗರೀಕ ಪ್ರಪಂಚದ ವಿವಿಧ ಘಟನೆಗಳು, ಹೇಯ ವಿದ್ಯಮಾನಗಳು, ಇತ್ಯಾದಿಗಳಿಂದ ಮನುಷ್ಯರಲ್ಲಿ ಪರಸ್ಪರ ಸ್ನೇಹ, ವಿಶ್ವಾಸಗಳು ಕಡಿಮೆಯಾಗುತ್ತಿವೆ.  ಇಂತಹ ಕಳಚಿದ ಸ್ನೇಹದ ಕೊಂಡಿಗಳನ್ನು ಬೆಸೆಯಲು ಹಬ್ಬದ ಸಂಧರ್ಭಗಳು ಅತ್ಯಂತ ಉಪಯುಕ್ತ. ಕುಟುಂಬ ಮಟ್ಟದಿಂದ,ರಾಷ್ಟ್ರೀಯ ಮಟ್ಟದವರೆಗೂ ಜನರನ್ನು ಸಂಘಟಿಸುವಲ್ಲಿ ಹಬ್ಬಗಳು ಪ್ರಮುಖ ಪಾತ್ರವಹಿಸುತ್ತವೆ.

                                                                ***

ವಿಳಾಸ: ಬಸವರಾಜ ಆಕಳವಾಡಿ, ನಿವೃತ್ತ ವಾರ್ತಾಧಿಕಾರಿ, ಸಿರಿಗಂಧ,  ವರ್ಣೇಕರ ಬಡಾವಣೆ, ಸ್ವಾಮಿ ವಿವೇಕಾನಂದ ಶಾಲೆ ಹಿಂಭಾಗ ಕೊಪ್ಪಳ-583231, ಮೊ : 9481347306 

Tuesday, 17 October 2017

'ನಿರಂತರ' - ನಮ್ಮೊಳಗಿನ ದನಿ.........





ಇಲ್ಲಿ ಒಂದಿಷ್ಟು ಹಾಸ್ಯ, ಹತಾಶೆ, ನೋವು, ಸಿಟ್ಟು, ಸೆಡವು, ಪ್ರಚಲಿತ ವಿದ್ಯಮಾನಗಳು, ಕಥೆ-ವ್ಯಥೆಗಳು, ಇತಿಹಾಸ, ದೇಶ, ಭಾಷೆ,ಧರ್ಮ, ಸಿನೆಮಾ, ಪುಸ್ತಕ ಪರಿಚಯ ಎಲ್ಲ ಸಿಗುತ್ತದೆ. ನಮ್ಮ ನಮ್ಮ ಅಭಿಪ್ರಾಯಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಬೇಕೆಂಬ ಆಶಯವೆ ಈ ‘ನಿರಂತರ’ ನಿಲುಮೆಯೊಳಗೆ ಒಂದು ಸುತ್ತು ಹೊಡೆದು ಬನ್ನಿ. ನಿಮ್ಮ ಅಭಿಪ್ರಾಯ ತಿಳಿಸಿ. ಸಾಧ್ಯವಾದಲ್ಲಿ ನಿಮ್ಮ ಒಂದು ಲೇಖನ ಅಥವ ಕವನಗಳನ್ನು ಪಾಸ್ ಪೋಟ್ ಗಾತ್ರದ ಭಾವಚಿತ್ರದೊಂದಿಗೆ☺☺☺ ನಮಗೆ ಕಳುಹಿಸಿದರೆ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಸೇರಿದಂತಾಗುತ್ತದೆ. ನಿಮ್ಮ ಲೇಖನಗಳನ್ನು nirantaramag@gmail.com -ಮೇಲ್ ವಿಳಾಸಕ್ಕೆ ಕಳುಹಿಸಿ. ಹನಿಹನಿ ಸೇರಿದರೆ ಹಳ್ಳ- ತೆನೆತೆನೆಗೂಡಿದರೆ ಬಳ್ಳ ಅನ್ನೋ ಮಾತಿದೆಯಲ್ಲ ಹಾಗೆಯೇ, ‘ನಿರಂತರ’ ವನ್ನು ನಿಂತ ನೀರಾಗದೇ ಕನ್ನಡ ಸಾಹಿತ್ಯ ಪ್ರಪಂಚದ ಮನೆ ಮಾತಾಗಿಸುವ ಬನ್ನಿ. ನಿರಂತರ ಬರಿ ನಮ್ಮದಲ್ಲ ಇದು ನಿಮ್ಮದು, ಪ್ರತಿಯೊಬ್ಬ ಕನ್ನಡಿಗನದು