Thursday, 19 October 2017

ಜನಪದ ಆಚರಣೆ : ಗ್ರಾಮೀಣರ ವಿಶಿಷ್ಟ ದೀಪಾವಳಿ

   ದೀಪಾವಳಿ ದೀಪಗಳ ಅರ್ಥತ್ ಬೆಳಕಿನ ಹಬ್ಬ. ಮನೆ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬ. ದೀಪಾವಳಿ ಹಬ್ಬವನ್ನು ನರಕಚತುರ್ದಶಿಯಿಂದ ಪ್ರಾರಂಭಿಸಿ, ಸಾಮಾನ್ಯವಾಗಿ ಮೂರು ದಿನಗಳವರೆಗೆ ಆಚರಿಸುವುದುಂಟು. ಪ್ರಾಂತಭೇದವಿಲ್ಲದೆ ಎಲ್ಲಾ ಹಿಂದೂಗಳು ಬಂಧು-ಬಾಂಧವರೊಂದಿಗೆ ಉತ್ಸಾಹದಿಂದ ಆಚರಿಸುವ ದೊಡ್ಡ ಹಬ್ಬ ‘ದೀಪಾವಳಿ’. ದೀಪಾವಳಿ ಹಬ್ಬವನ್ನು ‘ದೀವಳಿಗೆ’ ಹಾಗೂ ‘ಹಟ್ಟಿ ಹಬ್ಬ’ ವೆಂತಲೂ ಕರೆಯುತ್ತಾರೆ. ನಗರ -ಪಟ್ಟಣಗಳಲ್ಲಿ ದೀಪಾವಳಿ ಎಂದೊಡನೆ ದೀಪಗಳನ್ನು ಹಚ್ಚಿ ಮನೆಯ ಮುಂದಿನ ಅಂಗಳವನ್ನು ಸಿಂಗರಿಸುವುದರ ಜೊತೆಗೆ ಪಟಾಕಿ ಸಿಡಿಸಿ ಸಿಡಿಮದ್ದು ಸಿಡಿಸುವುದು ಹಬ್ಬದ ಪ್ರಮುಖ ಆಚರಣೆಯಾಗಿ ಕಂಡು ಬರುತ್ತದೆ. ಆದರೆ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲಿ ್ಲ ದೀಪಾವಳಿ ಹಬ್ಬದ ಆಚರಣೆಯ ಸ್ವರೂಪ ಕೊಂಚ ಭಿನ್ನವಾಗಿಯೇ ಇದೆ. ದೀಪಾವಳಿ ಹಬ್ಬವನ್ನ್ಬು- ಹಟ್ಟಿ ಹಬ್ಬವೆಂತಲೂ ಕರೆಯುತ್ತಾರೆ. ಮುಂಗಾರು ಮಳೆ ಮುಗಿದು ಹಿಂಗಾರು ಪ್ರಾಂಭವಾಗುವ ಸಂಧಿಕಾಲದಲ್ಲಿ ್ಲ ಹಟ್ಟಿಹಬ್ಬ ಬರುವುದು.
   ಹಬ್ಬದ ಸಂಪ್ರಾದಾಯಗಳು ಋತುಮಾನಕ್ಕನುಸಾರವಾಗಿ ನಮ್ಮ ಜನಾಂಗದಲ್ಲಿ ಬೆಳೆದು ಬಂದಿದೆ. ಕೆಲವು ಸಂಪ್ರದಾಯಗಳನ್ನು ಮಳೆಗಾಲದಲ್ಲಿಯೂ, ಕೆಲವನ್ನು ಚಳಿಗಾಲದಲ್ಲಿಯೂ, ಉಳಿದವುಗಳನ್ನು ಬೇಸಿಗೆಯಲ್ಲಿಯೂ ಜನರು ಆಚರಿಸುತ್ತಾರೆ. ವಿಶೇಷವಾಗಿ ಮಳೆಗಾಲದಲ್ಲಿ ಮಣ್ಣು ಪೂಜೆಗೆ ಸಂಬಂಧಿಸಿದ ಎಲ್ಲ ಸಂಪ್ರದಾಯಳನ್ನು, ಹಗಲು ಇರುಳೆನ್ನದೆ,ದಣಿವಿಲ್ಲದೆ ದುಡಿಮೆಯಲ್ಲಿ ತೊಡಗಿರುವ ಮೂಕ ಬಸವಣ್ಣನಿಗೆ, ಜೀವ ಕೋಟಿಯ ತೃಷೆ ಹಿಂಗಿಸುವ ಜೀವ ಜಲ ಕೊಡುವ ಮಳೆರಾಯನಿಗೆ, ಎಳ್ಳು-ಜೀರಿಗೆ ಮೊದಲ್ಗೊಂಡು ಬೆಳೆದು ಸಕಲ ಜೀವರಾಶಿಗೆ ಪಶು ಹಾಗೂ ಕೃಷಿ ಸಂಪತ್ತು ವೃದ್ಧಿಗಾಗಿ ಆಚರಿಸುವ ಹಲವಾರು ಸಂಪ್ರದಾಯಗಳೇ ಹಬ್ಬಗಳಾಗಿ ಮಾರ್ಪಾಟುಗೊಂಡಿರಬೇಕು.                                                                                         
ಇಡಿ ದೇಶಾದ್ಯಂತ ಜನರು ಸಂಭ್ರಮ-ಸಡಗರದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದರೆ ಉತ್ತರ ಕರ್ನಾಟಕದ ರೈತರು ಮನೆ ಮನೆಗಳಲ್ಲಿ ಪಶು ಸಂಪತ್ತು ವೃದ್ಧಿಗಾಗಿ ದೀಪಾವಳಿ ಸಂದರ್ಭದಲ್ಲಿ ಸಾಕು ಪ್ರಾಣಿಗಳಾದ ಆಕಳು, ಕುರಿ, ಆಡು, ಎತ್ತು ಮುಂತಾದ ಪ್ರಾಣಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಮನ ಸಲ್ಲಿಸುವುದು ಬೆಳೆದು ಬಂದಿದೆ. ಹಬ್ಬದ ಆಚರಣೆಯೂ ಬಹು ವಿಶಿಷ್ಟವಾಗಿದೆ. ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರು ದೀಪಾವಳಿ ಸಂದರ್ಭದಲ್ಲಿ ಆದ್ಧೂರಿಯಾಗಿ ಲಕ್ಷ್ಮೀ ಪೂಜೆ ನೆರವೇರಿಸುತ್ತಾರೆ. ಅದೇ ರೀತಿ ರೈತರ ಮನೆಗಳಲ್ಲಿ ನಡೆಯುವ ಲಕ್ಷ್ಮೀ ವೃದ್ಧಿಯಾಗಲು ಹಟ್ಟಿಯಲ್ಲಿರುವ ದನಕರು, ಕುರಿ-ಆಡು, ಎತ್ತುಗಳಿಗೂ ಅಂದು ಪೂಜೆ ಸಲ್ಲಿಸಲಾಗುತ್ತಿದೆ.

ಲಕ್ಷ್ಮೀ ಪೂಜೆ:

   ಹಬ್ಬದ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ. ಸಮುದಾಯದಿಂದ ಸಮುದಾಯಕ್ಕೆ ಬೇರೆಯಾಗಿದೆ. ಗ್ರಾಮೀಣ ಪ್ರದೇಶದ ರೈತರ ಮನೆಗಳಲ್ಲಿ ಲಕ್ಷ್ಮೀ ಪೂಜೆಯ ಆಚರಣೆ ವಿಶಿಷ್ಟವಾಗಿದೆ. ರೈತರ ಮನೆಗಳಲ್ಲಿ ದೀಪಾವಳಿ ಅಮವಾಸ್ಯೆಯ ದಿನ ರಾತ್ರಿ ಲಕ್ಷ್ಮೀಗೆ ವಿಶೇಷ ಪೂಜೆ ನೆರವೇರುತ್ತದೆ. ಅಂದು ಮನೆಯ ಲಕ್ಷ್ಮೀಗೆ ಪೂಜೆಗಾಗಿ ಹೊಸ ಸೀರೆಯನ್ನು ಕರಿ ಮೇಲೆ ಬರುವಂತೆ ಘಳಗಿ ಮಾಡಿ, ಬಂಗಾರದ ದಾಗೀನು, ನತ್ತುಗಳಿಂದ ಶೃಂಗರಿಸುವರು. ಅದಕ್ಕೆ ಲಕ್ಷ್ಮೀಯೆಂದು ಭಾವಿಸಿ ಪೂಜಿಸುವರು. ವಿಭೂತಿ, ಕುಂಕುಮಾರ್ಚನೆ ಮಾಡಿ ಸಜ್ಜಕದ ಹೋಳಿಗೆಯ ನೈವೇದ್ಯ ಹಿಡಿಯುವರು. ಕರ್ಪೂರದ ಆರತಿ ಎತ್ತಿ ಕಾಯಿ ಒಡೆದು ಭಕ್ತಿ ಪೂರ್ವಕವಾಗಿ ನಮಿಸುವರು. ಈ ರೀತಿಯಾಗಿ ಲಕ್ಷ್ಮೀಗೆ ಪೂಜೆ ಸಲ್ಲಿಸಲಾಗುವುದು. ಈ ಹಬ್ಬದಲ್ಲಿ ಲಕ್ಷ್ಮೀಗೆ ಪೂಜೆ ಸಲ್ಲಿಸುವ ಸಲುವಾಗಿ ಕಡ್ಡಾಯವಾಗಿ ಹೊಸ ಸೀರೆ ತಂದು ದೇವರಿಗೆ (ಲಕ್ಷ್ಮೀ)ಗೆ ಸಲ್ಲಿಸುವುದು ವಾಡಿಕೆ.

ಹಟ್ಟಿ ಪೂಜೆ:

ದನಗಳು ಹಾಗೂ ಕುರಿ ಮಂದೆಯ ಹಟ್ಟಿಯಲ್ಲಿ ಲಕ್ಚ್ಮೀಗೆ ವಿಶೇಷವಾಗಿ ಪೂಜೆ ಸಲ್ಲಿಸುವುದಿದೆ. ಹಟ್ಟಿ (ದಡ್ಡಿ)ಯ ಮಧ್ಯದಲ್ಲಿ ಬನ್ನಿ ಗಿಡದ ಟೊಂಗೆಯನ್ನು ಕಡಿದು ತಂದು ನಿಲ್ಲಿಸುತ್ತಾರೆ. ನೆಟ್ಟ ಬನ್ನಿ ಗಿಡದ ಕೆಳಗೆ ಅಮಾವಾಸ್ಯೆಯ ನೀರವ ಕತ್ತಲಲ್ಲಿ ಹಣತೆಯ ಮಂದ ಬೆಳಕಿನಲ್ಲಿ ಹಟ್ಟಿಯಲ್ಲಿ ಲಕ್ಚ್ಮೀ ಪೂಜೆ ಕೈಗೊಳ್ಳಲಾಗುವುದು. ಬನ್ನಿ ಗಿಡದಲ್ಲಿ ಲಕ್ಚ್ಮೀ ನೆಲೆಸಿರುವಳೆಂಬ ನಂಬಿಕೆಯೇ ಬನ್ನಿ ಗಿಡ ಕಡಿದು ತಂದು ಪೂಜಿಸುವುದಕ್ಕೆ ಕಾರಣವಾಗಿರಬಹುದು. ದೇವರಿಗೆ ನೈವೇದ್ಯ ಸಲ್ಲಿಸಿಯಾದ ಮೇಲೆ, ದೇವರ ಎಡೆಯನ್ನು ಪ್ರಸಾದವೆಂದು ಕುಟುಂಬದ ಸದಸ್ಯರಿಗೆ ಮಾತ್ರ ಹಂಚಿ ಉಳಿದ ಪ್ರಸಾದವನ್ನು ನೆಟ್ಟ ಬನ್ನಿ ಗಿಡದ ಬುಡದಲ್ಲಿಯೇ ತಗ್ಗು ತೆಗೆದು ಮುಚ್ಚುತ್ತಾರೆ. ಹಟ್ಟಿಯಲ್ಲಿ ನಡೆಯುವ ಪೂಜೆಯಲ್ಲಿ ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಬನ್ನಿ ಗಿಡವನ್ನು ವಿವಿಧ ಹೂ ಗಳಿಂದ ಅಲಂಕರಿಸುತ್ತಾರೆ. ಲಕ್ಷ್ಮೀ ಪೂಜೆಗಾಗಿ ಮನೆ-ಮಠಗಳನ್ನು ಸಿಂಗರಿಸುವುದರಿಂದ ಈ ಹಬ್ಬ ಧಾರ್ಮಿಕ ಹಾಗೂ ಸಾಮಾಜಿಕ ಎರಡು ದೃಷ್ಟಿಯಿಂದ ಮಹತ್ವ ಪೂರ್ಣವಾಗಿದೆ.
ಕೆಲವು ಪ್ರದೇಶದ ರೈತರ ಮನೆಗಳಲ್ಲಿ ಹಟ್ಟಿಯನ್ನು ಸ್ವಚ್ಛಗೊಳಿಸಿ ನೀರು ಹೊಡೆದು ತಾವು ಸಾಕಿದ ಪ್ರಾಣಿಗಳಾದ ದನ,ಕುರಿ,ಆಡುಗಳ ಸಗಣಿ ಮತ್ತು ಹಿಕ್ಕಿಯನ್ನು ಹಟ್ಟಿಯ ಮಧ್ಯ ಒಂದೆಡೆ ರಾಶಿ ಹಾಕಿ ರಾಶಿಯ ಮೇಲೆ ಬನ್ನಿ ಗಿಡದ ಟೊಂಗೆ ಮತ್ತು ಉತ್ತರಾಣಿ ಕಡ್ಡಿಯನ್ನು ಚುಚ್ಚಿ ಹೂವಿನಿಂದ ಅಲಂಕರಿಸಲಾಗುತ್ತದೆ. ಸಗಣಿ ರಾಶಿಯ ಮುಂದೆ  ಕಂಬಳಿಯನ್ನು ಹಾಸಿ ಅದರ ಮೆಲೆ ದಿನ ಬಳಕೆಯ ಕೃಷಿ ವಸ್ತು, ಉಪಕರಣಗಳನ್ನು ತಂದಿಟ್ಟು ಅವುಗಳ ಮೇಲೆ ಮೀಸಲು ನೀರು ಚಿಮುಕಿಸಿ  ವಿಭೂತಿ, ಕುಂಕುಮ, ಬಂಡಾರಗಳನ್ನು ಹಚ್ಚಿ ಪೂಜೆ ಸಲ್ಲಿಸಿತ್ತಾರೆ. ಹೋಳಿಗೆಯ ನೈವದ್ಯ ಅರ್ಪಿಸಿ ಕಾಯಿ ಒಡೆಯುತ್ತಾರೆ. ಬಳಿಕ ತಮ್ಮ ಮನೆಯ ಪಶು ಸಂಪತ್ತಿಗೆ ಕುಂಕುಮ ಹಚ್ಚಿ ಆರತಿ ಮಾಡುತ್ತಾರೆ. ಹೀಗೆ ಹಬ್ಬದ ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವುದು ಕಂಡು ಬರುತ್ತದೆ.

ಬೆಚ್ಚಹಾಯಿಸುವುದು:

    ಮಾರನೆಯ ದಿನ ಬಲಿಪಾಡ್ಯಮಿ. ಬಲಿಪಾಡ್ಯಮಿಯ ದಿನ ನಸುಕಿನಲ್ಲಿಯೇ ಎದ್ದು ಸ್ನಾನಾದಿಗಳನ್ನು ಮುಗಿಸಿ, ಹಸು-ಕರು, ಕುರಿ-ಮೇಕೆಗಳನ್ನು ಬೆಚ್ಚಹಾಯಿಸುವುದಕ್ಕೆ ತಯಾರಿ ನಡೆಸುವರು. ದನ-ಕರು, ಕುರಿ-ಮೇಕೆಗಳನ್ನು ಹಟ್ಟಿಯ ಬಾಗಿಲಲ್ಲಿ ತಯಾರಿಸಿದ ಬೆಚ್ಚದಲ್ಲಿ ಹಾಯಿಸುವ ಪದ್ಧತಿ ಈಗಲೂ ರೂಢಿಯಲ್ಲಿದೆ. ದಕ್ಷಿಣ ಕರ್ನಾಟಕದಲ್ಲಿ ಎತ್ತುಗಳಿಗೆ ಮಾತ್ರ ಸಂಕ್ರಾತಿ ಸಮಯದಲ್ಲಿ ಕಿಚ್ಚು ಹಾಯಿಸುತ್ತಾರೆ. ಬಯಲು ನಾಡಿನಲ್ಲಿ ಮುಂಬರುವ ಚಳಿಯನ್ನು ಎದುರಿಸಲು ವನವಾಸದೊಳಗಿರುವ ಪಾಂಡವರ ಚಳಿಯನ್ನು ತಡೆಯುವ ಸಾಮಥ್ರ್ಯ ದನ-ಕರುಗಳಿಗೂ ಬರಲೆಂದು ಹಟ್ಟಿಯ ಬಾಗಿಲ ಮುಂದೆ ಮೇವಿನ ಸೊಪ್ಪೆಯ ಕಿಚ್ಚು ಮಾಡುವರು. ಅದರಲ್ಲಿ ತುರುಬಿ,ತುಂಬಿ, ಗಣಜಲಿ, ಹೆಬ್ಬೇವು ಮೊದಲಾದ ಧಾರ್ಮಿಕ ಹಾಗೂ ಔಷಧಿ ಮಹತ್ವ ಪಡೆದ ಸಸ್ಯಗಳ ಎಲೆಗಳನ್ನು ಹಾಗೂ ಲೋಬಾನ ಹಾಕುವರು. ಹಟ್ಟಿಯ ತುಂಬ ಸುವಾಸನೆಯುಕ್ತ ಹೊಗೆ ಆವರಿಸುತ್ತಿದ್ದಂತೆ ಹಟ್ಟಿಯಲ್ಲಿರುವ ದನ-ಕರು, ಕುರಿ-ಮೇಕೆಗಳನ್ನು ತಂದು ಕಿಚ್ಚಿಗೆ ಹಾಯಿಸುವರು.
    ಪಾಂಡವರು ಮನೆಯನ್ನು ಸೇರುವ ಆ ದಿವಸದಲ್ಲಿ ಬೆಚ್ಚದ ಹೊಗೆಯೂ ಹಾಗೂ ಜಳವು ದನಕರು ಕುರಿಮರಿಗಳಿಗೆ ತಾಗಿದರೆ ಚಳಿಯು ಹತ್ತುವುದಿಲ್ಲವೆಂಬ ನಂಬಿಕೆ ರೈತರಲ್ಲಿ ಬೆಳೆದು ಬಂದಿದೆ. ಲಕ್ಷ್ಮೀ ಪೂಜೆಗೆ ಹಿಂದಿನ ದಿನವೇ ಸಿಂಗರಿಸಿದ ಹಟ್ಟಿಯ ದನಕರುಗಳನ್ನು ಕಿಚ್ಚು ಹಾಯಿಸುವಾಗಿನ ಸಡಗರದಲ್ಲಿ ಮನೆ-ಮಂದಿಯೆಲ್ಲರೂ ಪಾಲ್ಗೊಳ್ಳುವರು. ಮನೆಯ ಹೆಣ್ಣುಮಗಳು ಹಟ್ಟಿಯ ಬಾಗಿಲಿನಲ್ಲಿ ಹಾಕಿದ ಕಿಚ್ಚು ಹಾಯ್ದು ಹೊರಬರುವ ಮೊದಲ ಹಸು, ಕರು, ಕುರಿ, ಮರಿ, ಮೇಕೆಗೆ ಆರತಿ ಬೆಳಗಿ ಕುಂಕುಮ ಹಚ್ಚುವಳು. ಹೀಗೆ ಯಾವ ದನ, ಕರು, ಕುರಿ, ಮರಿ, ಮೇಕೆಗೆ ಕುಂಕುಮ ಹಚ್ಚಲಾಗುವುದೋ ಅದನ್ನು ಆ ಹೆಣ್ಣುಮಗಳಿಗೇ ಬಳುವಳಿಯಾಗಿ ಕೊಡುವ ಸಂಪ್ರದಾಯ ಇದೆ.

ಪಾಂಡವರ ಪೂಜೆ:

ಪಾಡ್ಯಮಿಯ ದಿನ ಬೆಳಿಗ್ಗೆ ದನ ಕರುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮ ಮುಗಿದ ನಂತರ ಗೃಹಣಿಯರು ಆಕಳ ಸಗಣಿಯಲ್ಲಿ ಪಾಂಡ್ರವ್ವ (ಪಾಂಡವ)ರನ್ನು ತಯಾರಿಸುತ್ತಾರೆ. ಐದು ಮೂರ್ತಿಗಳನ್ನು ವೃತ್ತಾಕಾರದಲ್ಲಿ ಕೂಡ್ರಿಸಿ, ಮಧ್ಯೆ ಭೂದೇವಿಯನ್ನು ಕೂಡ್ರಿಸುವರು. ತಲೆಯ ಮೇಲೆ ಅವರಿ ಹೂವು, ಇಲ್ಲವೆ ಚಂಡು ಹೂವು ಮತ್ತು ಉತ್ತಾರಾಣಿ ಕಡ್ಡಿಯನ್ನು ಚುಚ್ಚುವರು. ವೃತ್ತಾಕಾರದಲ್ಲಿ ಹಂಗ ನೂಲನ್ನು ಸುತ್ತು ಹಾಕಿ ಅರಿಷಿನ, ಕುಂಕುಮದ ಬೊಟ್ಟು ಇಡುವರು. ಮನೆಯ ಜಗಲಿಯಲ್ಲಿ ಕೂಡ್ರಿಸಿದ ಪಾಂಡವರಿಗೆ ಶ್ಯಾವಿಗೆ, ಬೆಲ್ಲ, ಹಾಲು, ತುಪ್ಪದ ನೈವೇದ್ಯ ಹಿಡಿಯುವರು. ಪಾಂಡವರು ದಕ್ಷಿಣದಿಂದ ಉತ್ತರ ದಿಕ್ಕಿಗೆ ತೆರಳಿದ ನೆನಪಿಗಾಗಿ ರೈತರಲ್ಲಿ ಪಾಂಡವರ ಪೂಜೆ ಬೆಳೆದು ಬಂದಿದೆ ಎಂದು ನಂಬಲಾಗಿದೆ.

ಅಣೀ-ಪೀಣಿ ಸಂಪ್ರದಾಯ:

ಉತ್ತರ ಕರ್ನಾಟಕದಲ್ಲಿ ದೀಪಾವಳಿ ಹಬ್ಬದ ಸಂರ್ಭದಲ್ಲಿ ದನ-ಕರುಗಳಿಗೆ ಬರುವ ಪೀಡೆ ದೂರಾಗಲಿ ಎಂದು ಆಶಿಸಿ ದೀಪ ಬೆಳಗುವುದೇ ‘ಆಣೀ-ಪೀಣಿ’ ಸಂಪ್ರದಾಯವಾಗಿದೆ. ಈ ಸಂದರ್ಭದಲ್ಲಿ ಹೇಳುವ ಆಣೀ-ಪೀಣಿ ಹಾಡುಗಳು “ಪಶು ಸಂಪತ್ತು ಹೆಚ್ಚಲಿ. ಅವು ಆರೋಗ್ಯದಿಂದ ಬಾಳಲಿ” ಎಂಬ ಸಂದೇಶ ಹೊಂದಿದೆ. ಈ ಸಂಪ್ರದಾಯ ಆಚರಣೆ ಮಲೆನಾಡಿನ ಅಂಟಿಕೆ-ಪಂಟಿಕೆ ಸಂಪ್ರದಾಯಕ್ಕಿಂತ ಭಿನ್ನವಾಗಿದೆ. ದನಕಾಯುವ ಅಥವಾ ಕುರಿಕಾಯುವ ಹುಡುಗರು ಈ ಸಂದರ್ಭದಲ್ಲಿ ಹಳ್ಳದ ದಂಡೆಯಲ್ಲಿ ಬೆಳೆದ ‘ಜೇಕು’ ಅಥವಾ ‘ಆಪು’ ವಿನಿಂದ ಅತ್ಯಂತ ಸುಂದರವಾಗಿ ಐದ್ಹೆಡೆ ನಾಗರ ಆಕಾರದಲ್ಲಿ ಹೆಣೆದು ಮಾಡಿದ ಗೂಡಿನಲ್ಲಿ ದೀಪವನ್ನು ಹಚ್ಚಿಟ್ಟುಕೊಂಡು ಮನೆ-ಮನೆಗೆ ಹೊಗಿ ಅಣೀ-ಪೀಣಿ ಹಾಡುಗಳನ್ನು ಹೇಳಿ ದನಕರುಗಳಿಗೆ ದೀಪ ಬೆಳಗುವರು.
                                                                “ ಅಣೀ-ಪೀಣಿ ಜಾಣಿಗೋ
ಎಣ್ಣೆ ರೋಟ್ಟಿ ಗಾಣಿಗೋ
ನಿಮ್ಮ ದೇವರ ಪೀಡಾ ಹೊಳ್ಯಾಚಿಕೋ
ನಿಮ್ಮ ದನಗಳ ಪೀಡಾ ಹೊಳ್ಯಾಚಿಕೋ”
ಹಟ್ಟಿಯಲ್ಲಿ ಅಥವಾ ಗ್ವಾದಲಿಯಲ್ಲಿ ಕಟ್ಟಿದ ಹಸು,ಕುರಿ,ಎತ್ತು,ಎಮ್ಮೆ,ಕರು,ಆಡುಗಳಿಗೆ ದೀಪ ಬೆಳಗಿ ಆ ಮನೆಯ ಪಶು ಸಂಪತ್ತಿಗೆ ಬರಬಹುದಾದ ಪೀಡೆಗಳು ಹೊಳೆಯಾಚೆ ದೂರಾಗಲಿ ಎಂದು ಹರಸುತ್ತಾರೆ. ಹಳ್ಳಿಗಳ ಪ್ರತಿಯೊಂದು ಮನೆಯಲ್ಲಿ ದನ ಕರುಗಳ ಮುಂದೆ ಹೋಗಿ ಹೀಗೆ ಹಾಡು ಹೇಳಿ ದೀಪ ಬೆಳಗುವ ಪದ್ಧತಿ ರೂಢಿಯಲ್ಲಿದ್ದು, ಅದು ಈಗ ಕ್ರಮೇಣ ಕ್ಷೀಣಿಸತೊಡಗಿದೆ.
ಆಧುನಿಕತೆಯ  ಅಬ್ಬರದಿಂದ ವಿದೇಶಿ ಸಂಸ್ಕøತಿ ವ್ಯಾಮೋಹದಿಂದ ನಮ್ಮತನವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ಹಬ್ಬಗಳ ಆಚರಣೆ ಹಾಗೂ ಅದರ ಬಗೆಗಿನ ನಮ್ಮ ನಿರ್ಲಿಪ್ತತೆ ಮಾನವ ಸಂಬಂಧಗಳನ್ನು ó ಕ್ಷೀಣಗೊಳಿಸುತ್ತಿದೆ. ಇಂತಹ ಸಂಧಿ ಕಾಲದಲ್ಲಿ ಹಬ್ಬಗಳ ಸಾಂಸ್ಕøತಿಕ ಪರಂಪದೆಯನ್ನು ಯುವ ಪೀಳಿಗೆಗೆ ಪುನರ್ ಮನನ ಮಾಡುವ ಅಗತ್ಯವಿದೆ.
ಸಂಬಂಧಗಳು ಬೆಳೆಯಬೇಕಾದರೆ, ಸಂಪರ್ಕ ಅಗತ್ಯ. ಆದರೆ ನಾಗರೀಕ ಪ್ರಪಂಚದ ವಿವಿಧ ಘಟನೆಗಳು, ಹೇಯ ವಿದ್ಯಮಾನಗಳು, ಇತ್ಯಾದಿಗಳಿಂದ ಮನುಷ್ಯರಲ್ಲಿ ಪರಸ್ಪರ ಸ್ನೇಹ, ವಿಶ್ವಾಸಗಳು ಕಡಿಮೆಯಾಗುತ್ತಿವೆ.  ಇಂತಹ ಕಳಚಿದ ಸ್ನೇಹದ ಕೊಂಡಿಗಳನ್ನು ಬೆಸೆಯಲು ಹಬ್ಬದ ಸಂಧರ್ಭಗಳು ಅತ್ಯಂತ ಉಪಯುಕ್ತ. ಕುಟುಂಬ ಮಟ್ಟದಿಂದ,ರಾಷ್ಟ್ರೀಯ ಮಟ್ಟದವರೆಗೂ ಜನರನ್ನು ಸಂಘಟಿಸುವಲ್ಲಿ ಹಬ್ಬಗಳು ಪ್ರಮುಖ ಪಾತ್ರವಹಿಸುತ್ತವೆ.

                                                                ***

ವಿಳಾಸ: ಬಸವರಾಜ ಆಕಳವಾಡಿ, ನಿವೃತ್ತ ವಾರ್ತಾಧಿಕಾರಿ, ಸಿರಿಗಂಧ,  ವರ್ಣೇಕರ ಬಡಾವಣೆ, ಸ್ವಾಮಿ ವಿವೇಕಾನಂದ ಶಾಲೆ ಹಿಂಭಾಗ ಕೊಪ್ಪಳ-583231, ಮೊ : 9481347306 

2 comments:

  1. ಬಸವರಾಜ ಸರ್ ಗೆ ನಮಸ್ಕಾರಗಳು ಜಾನಪದ ಶೈಲಿಯ ಅರ್ಥ ಗರ್ಭಿತ ಬರಹ ಎಂತವರನ್ನು ಬೆರಗು ಗೊಳಿಸುತ್ತದೆ ಸರ್...

    ReplyDelete
  2. ಬಸವರಾಜ ಸರ್ ಗೆ ನಮಸ್ಕಾರಗಳು ಜಾನಪದ ಶೈಲಿಯ ಅರ್ಥ ಗರ್ಭಿತ ಬರಹ ಎಂತವರನ್ನು ಬೆರಗು ಗೊಳಿಸುತ್ತದೆ ಸರ್...

    ReplyDelete