Monday, 27 November 2017

ರಾಜ್ಯದ ಮೊದಲ ಸಾಹಿತಿಗಳ ಸಹಕಾರ ಸಂಘ

          ಪುಸ್ತಕ ಪ್ರಕಟಣೆ/ ಸಾಹಿತಿಗಳಿಗೆ ಆರ್ಥಿಕನೆರವು/  ಸಾಹಿತ್ಯ ಚಟುವಟಿಕೆಗಳಿಗೆ ಒತ್ತು/ ಕ್ಷೇಮನಿಧಿ ಸ್ಥಾಪನೆ.

          





   - ಬಸವರಾಜ ಆಕಳವಾಡಿ  





             ಸಾಹಿತ್ಯಕ್ಷೇತ್ರದಲ್ಲಿ ಇಂದು ಪುಸ್ತಕ ಪ್ರಕಟಣೆ ಹಾಗೂ ಮಾರಾಟ ವ್ಯವಸ್ಥೆ ಬಹುದೊಡ್ಡ ಸಮಸ್ಯೆಯಾಗಿದೆ. ಲೇಖಕರೆ ಹಣ ಹಾಕಿ ಪ್ರಕಟಿಸಿದ ಪುಸ್ತಕ ಮಾರುಕಟ್ಟೆಯಲ್ಲಿ ಹಣ ತಾರದೇ ಲೇಖಕ ತೊಂದರೆಗೆ ಒಳಗಾಗುತ್ತಿದ್ದಾನೆ. ತಾನು ಬರೆದ ಪುಸ್ತಕವನ್ನು ಯಾವುದೇ ಪ್ರಕಾಶನ ಸಂಸ್ಥೆಗೆ ವಹಿಸೋಣವೆಂದರೆ ಲೇಖಕನಿಗೆ ಸರಿಯಾದ ಗೌರವಧನ ನೀಡದೇ ಶೋಷಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತದೆ.. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಬರಹಗಾರರೇ ಒಗ್ಗೂಡಿ ತಮ್ಮ ಪುಸ್ತಕ ಪ್ರಕಟಣೆ, ಮಾರಾಟ ಮಾಡುವ ವ್ಯವಸ್ಥೆ ಕೈಕೊಂಡರೆ ಹೇಗಿರುತ್ತದೆ ಎಂದು ಕೊಂಡರೆ? ಅನ್ನುವುದೇನು ಬಂತು, ಇಂತಹದೊಂದು ಪ್ರಯತ್ನ ಕೊಪ್ಪಳ ಜಿಲ್ಲೆಯಲ್ಲಿ ಕೈಗೂಡಿದೆ. ಸಾಹಿತಿ, ಬರಹಗಾರರು ಸೇರಿ ‘ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ’ ಸ್ಥಾಪಿಸಿದ್ದಾರೆ.

          ಸಾಹಿತ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿಯೇ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಸ್ತಿತ್ವದಲ್ಲಿದೆ. ಹಿಂದೆ ಸಾಹಿತಿಗಳಿಗೆ ಮೀಸಲಾಗಿದ್ದ ಸಂಸ್ಥೆ ಇಂದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಮಾರ್ಪಾಟು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಪರಿಷತ್ತಿನ ಉನ್ನತ ಹುದ್ದೆ ಅಲಂಕರಿಸಲು ಸಾಹಿತ್ಯೇತರ ವ್ಯಕ್ತಿಗಳು ದೌಡಾಯಿಸುತ್ತಿರುವುದರಿಂದ ಪರಿಷತ್ತಿನ ಮೂಲ ಉದ್ದೇಶಗಳು ಅರ್ಥ ಕಳೆದುಕೊಳ್ಳಬಹುದೆಂಬ ಅನುಮಾನ ದಟ್ಟವಾಗುತ್ತಿದೆ. ಈ ಸಂಧಿಕಾಲದಲ್ಲಿ ಸಾಹಿತಿ, ಬರಹಗಾರರು ಸೇರಿ ಸಾಹಿತ್ಯ ಚಟುವಟಿಕೆಗಳಿಗಾಗಿ ಸಹಕಾರ ಸಂಘ ಸ್ಥಾಪಿಸಿರುವುದು ಸ್ವಾಗತಾರ್ಹ ಮತ್ತು ಅನುಕರಣೀಯ ಕೂಡ.

ರಾಜ್ಯದ ಮೊದಲ ಸಹಕಾರ ಸಂಘ :
        ಪುಸ್ತಕ ಪ್ರಕಟಣೆ ಪವಿತ್ರ ಕಾರ್ಯವನ್ನು ಪ್ರಕಾಶನ ಸಂಸ್ಥೆಗಳು ವ್ಯಾಪಾರಿಕರಣದ ಸರಕಾಗಿಸಿಕೊಂಡಿವೆ. ಕೆಲ ಪ್ರಕಾಶನ ಸಂಸ್ಥೆಗಳು ಲೇಖಕರಿಗೆ ಅಲ್ಪ ಗೌರವ ಸಂಭಾವನೆ ನೀಡುವುದು. ಇಲ್ಲ ಗೌರವ ಸಂಭಾವನೆ ರೂಪದಲ್ಲಿ ಅವರದೇ ಪ್ರಕಟಿತ ಪುಸ್ತಕದ 25, 30 ಅಥವಾ 50 ಪ್ರತಿಗಳನ್ನು ನೀಡಿ ಲೇಖಕರನ್ನು ಸಂಪ್ರೀತರನ್ನಾಗಿಸಲಾಗುತ್ತಿದೆ. ಪುಸ್ತಕ ಮರು ಮುದ್ರಣಗೊಂಡರೆ ಕೆಲ ಪ್ರಕಾಶನ ಸಂಸ್ಥೆಗಳು ಲೇಖಕನಿಗೆ ಗೌರಸಂಭಾವನೆ ನೀಡುವುದಿರಲಿ, ಕಾನೂನಿನ್ವಯ ಲೇಖಕನ ಅನುಮತಿ ಪಡೆಯದಿರುವುದು ಕಳವಳಕಾರಿಯಾಗಿದೆ. ಇಂತಹ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಕೊಪ್ಪಳ ಜಿಲ್ಲೆಯ ಸಮಾನ ಮನಸ್ಕ ಸಾಹಿತಿ, ಲೇಖಕರು ಒಂದೆಡೆ ಸೇರಿ ಪುಸ್ತಕ ಪ್ರಕಟಣೆ, ಪುಸ್ತಕ ಪ್ರಕಟಿಸಲು ಮುಂದಾದ ಆರ್ಥಿಕತೊಂದರೆಯಲ್ಲಿರುವ ಲೇಖಕರಿಗೆ ಹಣಕಾಸಿನ ನೆರವು ಒದಗಿಸುವುದು. ಅಲ್ಲದೆ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಕಾರ್ಯಗಳು ಸೇರಿದಂತೆ ಸಾಹಿತಿಗಳಿಗೆ ನೆರವು ಕಲ್ಪಿಸುವ ಒಮ್ಮತದ ನಿರ್ಣಯ ಕೈಕೊಳ್ಳಲಾಯಿತು. ಸಹಕಾರ ಸಂಘಗಳ ಉಪನಿಬಂಧಕರ ಸೂಚನೆಯಂತೆ ಸಂಘದ ನೀತಿ, ನಿರೂಪಣೆಗಳ ಬೈಲಾ ಕರಡು ತಯಾರಿಸಿ ಸಲ್ಲಿಸಿದ್ದರ ಅನುಗುಣವಾಗಿ ರಾಜ್ಯದಲ್ಲಿ ಮೊಟ್ಟ ಮೊದಲ ಸಾಹಿತಿಗಳ ಸಹಕಾರ ಸಂಘ 2015ರ ಆಗಸ್ಟ್ 24 ರಂದು ಅಸ್ತಿತ್ವಕ್ಕೆ ಬಂದಿದೆ.

 ಸದಸ್ಯತ್ವ ಅರ್ಹತೆ :
ಈ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆಯ ಬಯಸುವವರು ಕನಿಷ್ಟ ಒಂದು ಸಾಹಿತ್ಯ ಕೃತಿಯನ್ನು ಪ್ರಕಟಿಸಿರಬೇಕು ಅಥವಾ ಅನುವಾದಿತ ಇಲ್ಲವೆ ಸಂಪಾದಿತ ಕೃತಿ ಪ್ರಕಟಿಸಿರಬೇಕು. ಇಲ್ಲವೆ ಪತ್ರಿಕೆಯಲ್ಲಿ ಪ್ರಕಟವಾದ ಕಥೆ, ಕಾವ್ಯ, ವಿಡಂಬನೆ, ವಿಮರ್ಶೆ, ವಿಶೇಷ ಲೇಖನಗಳ ಹತ್ತು ಪ್ರತಿಗಳನ್ನು ಅರ್ಜಿಯ ಜೊತೆಗೆ ಸಲ್ಲಿಸಿ ಸದಸ್ಯರಾಗಬಹುದು. ವ್ಯಾಪ್ತಿ ಜಿಲ್ಲೆಗೆ ಮಾತ್ರ ಸೀಮಿತವಾಗಿರುತ್ತದೆ. ಸಂಘವು ಸದ್ಯ 140 ಜನ ಸದಸ್ಯರನ್ನು ಹೊಂದಿದ್ದು, 2 ಲಕ್ಷ 5 ಸಾವಿರ ರೂ. ಗಳ ಷೇರು ಬಂಡವಾಳ ಹೊಂದಿದೆ.

ವ್ಯಾಪ್ತಿ, ಉದ್ದೇಶಗಳು :
             ಸಂಸ್ಥೆಯ ಮೂಲಕ ಪುಸ್ತಕ ಪ್ರಕಟಣೆ ಮತ್ತು ಪುಸ್ತಕ ಪ್ರಕಟಣೆಗೆ ಆರ್ಥಿಕ ನೆರವು ಒದಗಿಸುವುದು. ಯುವ ಬರಹಗಾರರಿಗೆ ಸಾಹಿತ್ಯ ಶಿಬಿರ, ಕಾವ್ಯಗೋಷ್ಠಿ ಕಮ್ಮಟಗಳನ್ನು ಏರ್ಪಡಿಸುವುದು. ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆ ಏರ್ಪಡಿಸುವುದು. ಸಂಸ್ಥೆಯ ವೆಬ್‍ಸೈಟ್ ತೆರೆದು ಸದಸ್ಯ ಸಾಹಿತಿಗಳ ಮತ್ತವರ ಗ್ರಂಥ ಪರಿಚಯ ದಾಖಲಿಸುವುದು. ಜಾತ್ರೆ, ಉತ್ಸವಗಳಲ್ಲಿ ಸಂಸ್ಥೆ ಪ್ರಕಟಸಿದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಸುವುದು. ಸಂಸ್ಥೆಯು ಪೂರ್ಣ ಪ್ರಮಾಣದ ಬ್ಯಾಂಕ್ ಆಗಿದ್ದು, ಸದಸ್ಯರು ಸೇರಿದಂತೆ ಇತರರು ಇಲ್ಲಿ ಉಳಿತಾಯ ಖಾತೆ ತೆರೆದು, ಠೇವಣಿ ಇಟ್ಟು ಹಣಕಾಸಿನ ವ್ಯವಹಾರ ಕೂಡ ನಡೆಸಬಹುದಾಗಿದೆ. 

ಸಾಹಿತಿ ಕ್ಷೇಮ ನಿಧಿ :
ಸಂಘದ ಸದಸ್ಯರಾಗಿರುವ ಸಾಹಿತಿ, ಲೇಖಕರು ಅಪಘಾತ, ವಾಸಿಯಾಗದ ಖಾಯಿಲೆ, ತೀವ್ರತರ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಲ್ಲಿ ಅಂತಹವರಿಗೆ ನೆರವು  ನೀಡಲು ಸಾಹಿತಿಗಳ ಕ್ಷೇಮನಿಧಿ ಸ್ಥಾಪಿಸಲಾಗಿದೆ. ಸದಸ್ಯರು ಯಾವುದೇ ಕಾರಣದಿಂದ ಸಾವನ್ನಪಿದ ಸಂದರ್ಭದಲ್ಲಿ ಅವರ ಕುಟುಂಬದವರು ಆರ್ಥಿಕ ತೊಂದರೆಯಲ್ಲಿದ್ದರೆ ಅವರ ಅಂತ್ಯಸಂಸ್ಕಾರಕ್ಕೆ ನೆರವು ನೀಡಲು ‘ಆಪತ್ ನಿಧಿ’ ಸ್ಥಾಪಿಸಿದೆ.

ಅವಿರೋಧ ಆಯ್ಕೆ :
ಸಂಘ ನೋದಣಿಯಾಗುತ್ತಿದ್ದಂತೆ ಸಹಕಾರ ಸಂಘಗಳ ಚುನಾವಣಾ ಆಯುಕ್ತರು ಸಂಘದ ಪದಾಧಿಕಾರಿಗಳ ಆಯ್ಕೆ ಸಂಬಂಧ ಚುನಾವಣೆ ಘೋಷಿಸಿ, ಚುನಾವಣಾಧಿಕಾರಿಯನ್ನು ನೇಮಿಸಿದರು. ಚುನಾವಣಿಯಲ್ಲಿ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ ಸಂಘದ ಪರಿಕಲ್ಪನೆಯನ್ನು ಕಾರ್ಯ ರೂಪಕ್ಕಿಳಿಸಿದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಸವರಾಜ ಆಕಳವಾಡಿ ಅವರು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಜಿಲ್ಲೆಯ ನಾಲ್ಕೂ ತಾಲೂಕುಗಳ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಎಚ್. ಎಸ್. ಪಾಟೀಲ, ಡಾ. ಪಾರ್ವತಿ ಪೂಜಾರ, ಈಶ್ವರ ಹತ್ತಿ, ಡಾ. ಹನುಮಾಕ್ಷಿ ಗೋಗಿ, ವೈ.ಬಿ.ಜೂಡಿ, ಡಾ. ಬಸವರಾಜ ಪೂಜಾರ, ಡಾ. ಶರಣಬಸಪ್ಪ ಕೋಲ್ಕಾರ, ರಮೇಶ ಗಬ್ಬೂರ, ಡಾ. ಮುಮ್ತಾಜ್ ಬೇಗಂ, ಮುನಿಯಪ್ಪ ಹುಬ್ಬಳ್ಳಿ, ಡಾ.ಕೆ.ಬಿ.ಬ್ಯಾಳಿ, ಚಂದಪ್ಪ ಹಕ್ಕಿ ಮತ್ತು ನಿಂಗಪ್ಪ ಸಜ್ಜನ ಅವರುಗಳು ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ  ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಹದಿನೈದು ಜನ ಆಡಳಿತ ಮಂಡಳಿ ಸದಸ್ಯರಿದ್ದು, ಆ ಪೈಕಿ ಪ.ಜಾ ಪ.ಪಂ ಕ್ಕೆ ಸೇರಿದ ಒಬ್ಬರು, ಹಿಂದುಳಿದ ವರ್ಗಕ್ಕೆ ಸೇರಿದ ಇಬ್ಬರು ಹಾಗೂ ಇಬ್ಬರು ಮಹಿಳಾ ಸದಸ್ಯರು ಕಾನೂನು ಬದ್ಧವಾಗಿ ಆಯ್ಕೆಗೊಂಡಿರುತ್ತಾರೆ. ಇನ್ನುಳಿದ ಸದಸ್ಯರು ಸಾಮಾನ್ಯ ವರ್ಗ ಪ್ರತಿನಿಧಿಸುತ್ತಾರೆ. 

ರೈತರ ಆತ್ಮಹತ್ಯೆ ತಡೆ :
ಈ ವರ್ಷ ರಾಜ್ಯದಲ್ಲಿ ಭೀಕರ ಬರ ತಾಂಡವಾಡುತ್ತಿದೆ. ಬರದ ಕರಿ ನೆರಳಿನಿಂದ ರೈತ ಸಮುದಾಯ ತತ್ತರಿಸಿ ಹೋಗಿದೆ. ಜೀವನ ನಿರ್ವಹಣೆ ಕಷ್ಟವಾಗಿ ರೈತರು ಸಾವಿರ ಸಂಖ್ಯೆಯಲ್ಲಿ ಸಾವಿಗೆ ಶರಣಾಗುತ್ತಿದ್ದಾರೆ. ಸಾಲ ಸೋಲಗಳಿಗೆ ಬಲಿಯಾಗಿದ್ದಾರೆ. ಬರ ನಿರ್ವಹಣೆಯಲ್ಲಿ ಸಾವೇ ಅಂತಿಮವಲ್ಲ. ಯಶಸ್ವಿ ಕೃಷಿಯಿಂದ ಬರ ನಿರ್ವಹಣೆ ಸಾಧ್ಯ ಎಂಬುದನ್ನು ರೈತ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಉದ್ಧೇಶದಿಂದ ‘ರೈತರ ಆತ್ಮಹತ್ಯೆ ತಡೆ ಮತ್ತು ಬರ ನಿರ್ವಹಣೆ’ ಕುರಿತ ಗದ್ಯ ಮತ್ತು ಪದ್ಯ ಎರಡು ಸಾಹಿತ್ಯ ಕೃತಿಗಳನ್ನು ಪ್ರಕಟಿಸಲು ಸಂಸ್ಥೆ ನಿರ್ಧರಿಸಿದೆ. ನಾಡಿನ ಹೆಸರಾಂತ ಸಾಹಿತಿ, ಬರಹಗಾರರು, ಕೃಷಿ ಹಾಗೂ ಆರ್ಥಿಕ ತಜ್ಞರು, ಕೃಷಿ ವಿಶ್ವ ವಿದ್ಯಾಲಯ ಪ್ರಾಧ್ಯಾಪಕರು, ರೈತ ಸಮುದಾಯ ಮತ್ತು ರೈತ ಮುಖಂಡರುಗಳಿಂದ ಲೇಖನ, ಕವಿತೆ ಒಳಗೊಂಡಂತೆ ಪುಸ್ತಕ ಬಿಡುಗಡೆಗೆ ಸಿದ್ಧಗೊಂಡಿದೆ.

ವಿದ್ಯಾರ್ಥಿಗಳಿಂದ ಕತೆ, ಕವನ ಸ್ಪರ್ಧೆ:
ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ಧೇಶದಿಂದ ಕಾಲೇಜು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕತೆ ಹಾಗೂ ಕವನ ಸ್ಪರ್ಧೆ ಏರ್ಪಡಿಸಿದೆ. ವಿದ್ಯಾರ್ಥಿಗಳನ್ನು ಸಾಹಿತ್ಯದ ಕಡೆಗೆ ಉತ್ತೇಜಿಸುವ ಸಲುವಾಗಿ ಏರ್ಪಡಿಸಲಾದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಆಕರ್ಷಕ ಬಹುಮಾನಗಳನ್ನು ಸಹ ಪ್ರಕಟಿಸಿದೆ.

ಸಾಹಿತ್ಯ ಸಂಚಾರ :
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಮಾಸಿಕ ಸಭೆ ಪ್ರತಿ ತಿಂಗಳು ಎರಡನೇ ಭಾನುವಾರ ಆಯೋಜನೆಗೊಂಡಿದೆ. ಸಂಘದ ಕಾರ್ಯಕಾರಿ ಮಂಡಳಿ ಸಭೆಯ ಜೊತೆಗೆ ಸದಸ್ಯ ಸಾಹಿತಿಯೊಬ್ಬರ ಕೃತಿ ಪರಿಚಯ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಪ್ರತಿ ತಿಂಗಳು ಬೇರೆ ಬೇರೆ ತಾಲೂಕುಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಅಪಾರ ಜನ ಬೆಂಬಲವೂ ವ್ಯಕ್ತವಾಗುತ್ತಿದೆ.

ಪುಸ್ತಕ ಪ್ರಕಟಣೆಗೆ ನೆರವು : 
ಸಾಹಿತ್ಯದ ಯಾವುದೇ ಪ್ರಕಾರ ಕುರಿತು ಸರ್ಕಾರ, ವಿಶ್ವ ವಿದ್ಯಾಲಯಗಳು, ಪ್ರಕಾಶನ ಸಂಸ್ಥೆಗಳು ಒಂಕ್ಕಿಂತ ಹೆಚ್ಚು ಸಂಪುಟಗಳನ್ನು ಪ್ರಕಟಿಸಿದಾಗ ಹೆಚ್ಚಿನ ಅಧ್ಯಯನಕ್ಕಾಗಿ ಸದಸ್ಯರು ಅಂತಹ ಅಮೂಲ್ಯ ಸಂಪುಟಗಳನ್ನು ಹಾಗೂ ಲೇಖನ ಸಾಮಗ್ರಿ ಖರೀದಿಸಲು ಅನುಕೂಲವಾಗುವ ದೃಷ್ಟಿಯಿಂದ ಸಂಸ್ಥೆ ರೂ. 10,000-00 ಗಳ ವರೆಗೆ ತುರ್ತು ಸಾಲ ಮಂಜೂರು ಮಾಡುವ ಯೋಜನೆ ಜಾರಿಗೊಳಿಸಿದೆ. ಆರ್ಥಿಕ ಸಂಕಷ್ಟದಲ್ಲಿ ಇರುವ ಲೇಖಕರಿಗೆ ಪುಸ್ತಕ ಪ್ರಕಟಣೆಗಾಗಿ ಸಾಲ ಸೌಲಭ್ಯ ಒದಗಿಸಲಾಗುವುದು. ಸದಸ್ಯರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ 24 ಗಂಟೆಯೊಳಗಾಗಿ ಸಾಲ ಮಂಜೂರು ಮಾಡಲಾಗುವುದು. ನಂತರ ಸಭೆಯ ಮುಂದಿಟ್ಟು ಘಟನೋತ್ತರ ಮಂಜೂರಾತಿ ಪಡೆದುಕೊಳ್ಳಲಾಗುವುದು. ಈ ಒಂದು ವರ್ಷದಲ್ಲಿ ರೂಪಾಯಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಸಾಲ ಮಂಜೂರು ಮಾಡಲಾಗಿದೆ. 

ಯಶಸ್ವಿನಿ ಯೋಜನೆ : 
ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈತ ಸಮುದಾಯಕ್ಕೆ ಆರೋಗ್ಯ ರಕ್ಷಣೆ ನೀಡುತ್ತಿರುವ ಸರ್ಕಾರದ ಮಹತ್ವಕಾಂಕ್ಷಿ ಯಶಸ್ವಿನಿ ಯೋಜನೆಯನ್ನು ಸಂಘದ ಸಾಹಿತಿ, ಬರಹಗಾರ ಸದಸ್ಯರಿಗೂ ವಿಸ್ತರಿಸಲಾಗಿದೆ. ಇದರಿಂದ ಸಾಹಿತಿಗಳು ಮೂರು ಲಕ್ಷ ರೂ.ಗಳ ವರೆಗೆ ಆರೋಗ್ಯ ವಿಮೆ ರಕ್ಷಣೆ ಪಡೆಯಬಹುದಾಗಿದೆ. ಪ್ರತಿಯೊಬ್ಬರಿಗೂ ಯಶಸ್ವಿನಿ ಕಾರ್ಡ ಹಾಗೂ ಗುರುತಿನ ಕಾರ್ಡ ನೀಡಲಾಗುವುದು.
ಸಾಹಿತಿ, ಬರಹಗಾರರ ಪುಸ್ತಕ ಪ್ರಕಟನೆಗೆ ಆರ್ಥಿಕ ನೆರವು ಕಲ್ಪಿಸುವ, ಸಂಘಟಿತ, ಗುಣಾತ್ಮಕ ಸಾಹಿತ್ಯ ಚಟುವಟಿಕೆ ಕೈಕೊಳ್ಳಲು ಹಾಗೂ ಆರ್ಥಿಕ ತೊಂದರೆಯಲ್ಲಿರುವ ಬರಹಗಾರರಿಗೆ ನೆರವು ಕಲ್ಪಿಸುವ ವಿನೂತನ ಸಂಸ್ಥೆ ಸ್ಥಾಪನೆಯಿಂದ ಸಾಹಿತ್ಯ ಬರಹಗಾರರಲ್ಲಿ ಹೊಸ ಆಸೆ ಮೂಡಿದೆ. ಸಂಘವು ಪ್ರಗತಿ ಪಥದತ್ತ ಮೂರನೇ ವರ್ಷದಲ್ಲಿ ಮುನ್ನಡೆದಿದೆ.

                                                **


ವಿಳಾಸ: ಬಸವರಾಜ ಆಕಳವಾಡಿ, ನಿವೃತ್ತ ವಾರ್ತಾಧಿಕಾರಿ, ಸಿರಿಗಂಧ,  ವರ್ಣೇಕರ ಬಡಾವಣೆ, ಸ್ವಾಮಿ ವಿವೇಕಾನಂದ ಶಾಲೆ ಹಿಂಭಾಗ ಕೊಪ್ಪಳ-583231, ಮೊ : 9481347306, e-mail: akalawadii.b@gmail.com 

Wednesday, 22 November 2017

ಗ್ರಂಥ ಸಂಪದ




           ಈ ಪುಸ್ತಕವು ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ ವಿಜೇತ ರಂಜಾನ ದರ್ಗಾ ರವರ ಇತ್ತೀಚಿನ ಕೃತಿ. ದರ್ಗಾರವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿ ಶಾಲಿ ಕವಿಗಳಲ್ಲಿ ಒಬ್ಬರು. ಸಮತಾವಾದ ಮತ್ತು ಸೂಫಿ ವಿಚಾರಗಳ ನೆಲೆಯಲ್ಲಿ ವಚನ ಚಳವಳಿಯ ತತ್ವಗಳಿಗೆ ಹೊಸ ಹೊಲವು ನೀಡುವ ಪ್ರಯತ್ನವನ್ನು ಅವರು ಮಾಡಿದ್ದಾರೆ. 
    ಬಸವಣ್ಣನವರ ಏಕದೇವೋಪಾಸನೆಯ ಧರ್ಮ ಸಂಪೂರ್ಣ ಕ್ರಾಂತಿಕಾರಿ ಧರ್ಮವಾಗಿದೆ. ಇಡೀ ಜಗತ್ತಿನಲ್ಲಿ ದೇವಸ್ಥಾನಳಿಲ್ಲದ ಧರ್ಮ ಎಂದರೆ ಲಿಂಗಾಯತ ಧರ್ಮ ಒಂದೇ ಆಗಿದೆ. ಈ ಧರ್ಮದಲ್ಲಿ ಮಾನವರೇ ಜೀವಂತ ದೇವಾಲಯಗಳಾಗಿದ್ದಾರೆ. ನಾವು ನಮ್ಮೊಳಗಿನ ದೇವರ ಜೊತೆ ಒಂದಾಗುವುದೇ ಲಿಂಗಸಾಮರಸ್ಯ. ಲಿಂಗವಂತ ಧರ್ಮದಲ್ಲಿ ಏನ್ನುಂಟು ಎನಿಲ್ಲ? ಈ ಕೃತಿಯಲ್ಲಿ ಹಲಾವಾರು ಸೂಕ್ಷ್ಮ ವಿಚಾರಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ಈ ಪುಸ್ತಕ ಲಡಾಯಿ ಪ್ರಕಾಶನ ಗದಗ ಇವರಿಂದ 2017ರ ಸಾಲಿನಲ್ಲಿ ಪ್ರಕಟಗೊಂಡಿದೆ. ಪುಟ.ಸಂ 64, ಬೆಲೆ ರೂ. 30.