ಗ್ರಾಮಾಂತರ ಪ್ರದೇಶದಲ್ಲಿರುವ ನಮ್ಮ ಕಾಲೇಜಿಗೆ ಪ್ರವೇಶ ಕೋರಿ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ ಬಹುತೇಕ ವಾಣಿಜ್ಯ ವಿಭಾಗಕ್ಕೆ ಸೇರಲು ಬಯಸಿ ಬರುವವರಾಗಿದ್ದರು. ಪ್ರೌಢಶಾಲೆಯಲ್ಲಿ ಕನ್ನಡಮಾಧ್ಯಮದಲ್ಲಿ ಅಭ್ಯಾಸಮಾಡಿ ಕಡಿಮೆ ಅಂಕ ಗಳಿಸಿ ತೇರ್ಗಡೆಯಾಗಿದ್ದ ವಿದ್ಯಾರ್ಥಿಗಳಿಗೂ ಕಲಾ ವಿಭಾಗದ ಬದಲಿಗೆ ವಾಣಿಜ್ಯವಿಭಾಗವನ್ನೇ ಸೇರುವ ತವಕ. ಅಂಥವರನ್ನು ಹಿಮ್ಮೆಟ್ಟಿಸಲು ಒಂದು ಅಸ್ತ್ರವಂತೂ ಸಿದ್ಧವಾಗಿರುತ್ತಿತ್ತು. ಕಾಮರ್ಸ್ ತೆಗೆದುಕೊಂಡರೆ ಅಕೌಂಟೆನ್ಸಿ ವಿಷಯವನ್ನಿಡೀ ಇಂಗ್ಲೀಷ್ನಲ್ಲೇ ಉತ್ತರಿಸಬೇಕಾಗುತ್ತದೆ ಎಂದು ಹೆದರಿಸಿದರೆ ಆಯಿತು.
ಆದರೆ, ಈ ವಿಷಯ ನನ್ನನ್ನೂ ಕಾಡದಿರಲಿಲ್ಲ. ಈ ಸಮಸ್ಯೆಯ ವಾಸ್ತವ ಅಂಶವೇನೆಂದು ವಾಣಿಜ್ಯವಿಭಾಗದ ಉಪನ್ಯಾಸಕರನ್ನೇ ಕೇಳಿದೆ. ಹೌದು ಸರ್, ಅಕೌಂಟೆನ್ಸಿ ವಿಷಯವನ್ನು ಕನ್ನಡದಲ್ಲಿ ಬರೆಯಲಾಗುವುದಿಲ್ಲ ಎಂದರು. ಸರಿಯಾದ ಪಠ್ಯಗಳೂ ಕನ್ನಡದಲ್ಲಿ ಲಭ್ಯವಿಲ್ಲ. ಪರೀಕ್ಷೆಯಲ್ಲೇನೋ ಕನ್ನಡದಲ್ಲೂ ಪ್ರಶ್ನಪತ್ರಿಕೆ ಸಿದ್ಧಪಡಿಸಿ ಕೊಡುತ್ತಾರೆ. ಆದರೆ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಅಧ್ಯಾಪಕರೂ , ಉತ್ತರಿಸುವ ವಿದ್ಯಾರ್ಥಿಗಳೂ ತೀರಾ ಕಡಿಮೆ ಎಂಬ ವಿವರಣೆಯನ್ನು ಕೇಳಿ ಆಶ್ಚರ್ಯವಾಯಿತು. ನಮ್ಮ ಕಾಲೇಜಿನ ಮಕ್ಕಳಿಗಾದರೂ ಕನ್ನಡಮಾಧ್ಯಮದಲ್ಲಿ ಕಲಿಸಬಹುದಲ್ಲ ಎಂದುದಕ್ಕೆ ಸರಿಯಾದ ಕನ್ನಡಪಠ್ಯಗಳಿಲ್ಲದೆ ಹೇಗೆ ಬೋಧಿಸುವುದೆಂದು ಆತ ನಿಸ್ಸಹಾಯಕತೆಯನ್ನು ವ್ಯಕ್ತಪಡಿಸಿದರು. ಇರಲಿ, ನೋಡೋಣವೆಂದು ಮೈಸೂರಿನ ಪ್ರಸಿದ್ಧ ಅಂಗಡಿಯೊಂದಕ್ಕೆ ಹೋಗಿ ಪಿಯುಸಿಯ ಅಕೌಂಟೆನ್ಸಿ ಕನ್ನಡಮಾಧ್ಯಮದ ಪಠ್ಯಪುಸ್ತಕ ಕೊಡಿ ಎಂದೆ. ಆತ ಅಚ್ಚರಿಯಿಂದ ನನ್ನ ಮುಖವನ್ನೇ ಒಮ್ಮೆ ನೋಡಿದರು. ಯಾಕೆ, ಪುಸ್ತಕ ಇಲ್ಲವೇ ಎಂದುದಕ್ಕೆ ಮೌನವಾಗಿ ಕಪಾಟಿನಿಂದ ಪುಸ್ತಕವೊಂದನ್ನು ಹುಡುಕಿ ತೆಗೆದು ಧೂಳು ಕೊಡವಿದರು. ಪುಸ್ತಕದ ಬೆಲೆ ಹೇಳುವುದರ ಜೊತೆಗೆ ಇನ್ನೊಂದು ಮಾತು ಸೇರಿಸಿದರು: ” ಬೇಡವೆಂದು ವಾಪಸ್ ತಂದರೆ ತೆಗೆದುಕೊಳ್ಳುವುದಿಲ್ಲ”! ಇದಾಗಿ ಏಳೆಂಟು ವರ್ಷಗಳು ಕಳೆದಿವೆ. ಪಠ್ಯಕ್ರಮವೂ ಬದಲಾಗಿದೆ. ಇವತ್ತಿಗೂ ಹನ್ನೊಂದನೇ ತರಗತಿಯ ಅಕೌಂಟೆನ್ಸಿ ಅಥವಾ ಲೆಕ್ಕಶಾಸ್ತ್ರದ ಪಠ್ಯಪುಸ್ತಕಗಳು ಕನ್ನಡದಲ್ಲಿ ಸಿಗುತ್ತಿಲ್ಲ. ಇತ್ತ ನಾವು ಇಂಜನಿಯರಿಂಗ್ ಹಾಗೂ ವೈದ್ಯಕೀಯ ಮತ್ತಿತರ ಉನ್ನತ ಶಿಕ್ಷಣ ತರಗತಿಗಳನ್ನು ಕನ್ನಡದಲ್ಲಿ ಬೋಧಿಸುವ ದೊಡ್ಡದೊಡ್ಡ ಮಾತುಗಳನ್ನು ಆಡುತ್ತಿದ್ದೇವೆ.
ಕನ್ನಡ ಭಾಷೆಯ ಅಭಿವೃದ್ದಿಯ ಬಗ್ಗೆ ಮಾತನಾಡುವಾಗಲೆಲ್ಲ, ಆಡಳಿತ ಮತ್ತಿತರ ವ್ಯವಹಾರಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಕೊಡುವಷ್ಟು ಮಹತ್ವವನ್ನು ಶಿಕ್ಷಣಕ್ಷೇತ್ರದ ವಿಷಯದಲ್ಲಿ ನೀಡದಿರುವುದು ಅಚ್ಚರಿಯ ವಿಷಯವಾಗಿದೆ. ಇನ್ನು ಗೋಕಾಕ್‌ವರದಿಯ ಅನುಷ್ಠಾನ, ತತ್ಸಂಬಂಧವಾದ ಚಳುವಳಿ, ವಾದ ಪ್ರತಿವಾದ ಮೊದಲಾದವು ಶೈಕ್ಷಣಿಕವಾಗಿ ಕನ್ನಡ ಜಾಗೃತಿಯ ಸೂಚನೆ ನೀಡಿದರೂ ಅವೆಲ್ಲದರ ಒಟ್ಟಭಿಪ್ರಾಯ ಪ್ರೌಢಶಾಲೆಯಲ್ಲಿ ಮಾತೃಭಾಷಾ ಬೋಧನೆಗೆ ಸಂಬಂಧಪಟ್ಟಂತೆ ಎಷ್ಟು ಅಂಕಗಳ ಪ್ರಶ್ನ ಪತ್ರಿಕೆಯಿರಬೇಕು, ಕನ್ನಡ ಪತ್ರಿಕೆಗೆ ಸಂಸ್ಕೃತಕ್ಕಿಂತ ಇಪ್ಪತ್ತೈದು ಅಂಕವಾದರೂ ಹೆಚ್ಚಿಗೆ ನಿಗದಿ ಪಡಿಸದಿದ್ದರೆ ಕನ್ನಡದ ಘನತೆ ಏನಾದೀತು ಎಂಬಷ್ಟಕ್ಕೆ ಸೀಮಿತವಾಗಿದೆಯೇ ಹೊರತು ಸಮಗ್ರ ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಜಾರಿಗೆ ತರಬೇಕಾದುದರ ಅವಶ್ಯಕತೆ, ಅನಿವಾರ್ಯಷತೆಗಳ ಬಗೆಗೆ ಏನನ್ನೂ ಹೇಳುವುದಿಲ್ಲ.
ಯಾವುದೇ ಭಾಷೆಯ ರೂಢಿ, ಬೆಳವಣಿಗೆಗಳು, ಒಂದು ಮಗು ಮೊದಲಿಗೆ ಮನೆಯಲ್ಲೂ ಅನಂತರ ಶಾಲೆಯಲ್ಲೂ ಏನನ್ನೂ ಹೇಗೆ ಕಲಿಯುತ್ತದೆ ಎಂಬುದನ್ನೇ ಮುಖ್ಯವಾಗಿ ಅವಲಂಬಿಸಿವೆ. `ಮಾತೃಭಾಷೆ’ ಎಂಬ ಪದ, ಮಗು ಶಾಲೆಗೆ ಕಾಲಿರಿಸುವ ಮೊದಲೇ ತನ್ನ ಮನೆಯ ಪರಿಸರದಲ್ಲಿ ಕೇಳಿ ತಿಳಿದು ಕಲಿತ ನುಡಿಗೆ ಅನ್ವಯವಾಗುತ್ತದೆ. ಮಾತೃಭಾಷೆಯೆಂಬುದು `ಮಾತೃ’ ಎಂದರೆ ತಾಯಿಗೇ ಸಂಬಂಧಪಟ್ಟಿರುವುದೆಂದು ಅರ್ಥೈಸಬೇಕಾಗಿಲ್ಲ. ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ಮಗುವಿಗೆ ಪರಿಚಿತವಾಗುವ ಭಾಷೆ ಪ್ರಾದೇಶಿಕ ಭಾಷೆಯೂ ಆಗಿರಬಹುದು. ಮಗು ಶಿಕ್ಷಣವನ್ನು ಪಡೆಯಲಿಕ್ಕಾಗಿ ಶಾಲೆಯನ್ನು ಪ್ರವೇಶಿಸುವಾಗ ತಾನು ಮನೆಯಲ್ಲಿ ಕೇಳಿ, ಕಲಿತ ಭಾಷೆಗಿಂತ ಭಿನ್ನವಾದ ಭಾಷೆಯೊಂದು ಮಾಧ್ಯಮವಾಗಿ ಎದುರಾಗುವಾಗ ಮಗುವಿಗೆ ಸಹಜವಾಗಿಯೆ ಕಕ್ಕಾಬಿಕ್ಕಿಯಾಗುತ್ತದೆ. ಭಿನ್ನವಾದ ಭಾಷಾ ಮಾಧ್ಯಮದ ಪರಿಸರಕ್ಕೆ ಒಗ್ಗಿಕೊಳ್ಳಲು ಅದಕ್ಕೆ ಸುಲಭ ಸಾಧ್ಯವೇನಲ್ಲ.
ವಿದ್ಯಾರ್ಥಿಗೆ ತನ್ನ ಮಾತೃಭಾಷಾ ಮಾಧ್ಯಮದ ಮೂಲಕ ಕೊಡಲಾಗುವ ಶಿಕ್ಷಣವನ್ನು ಗ್ರಹಿಸಲು ಸಾಧ್ಯವಾಗುವಂತೆ ಅನ್ಯಭಾಷೆಗಳಿಂದ ಸಾಧ್ಯವಾಗದೆಂದು ಶಿಕ್ಷಣ ತಜ್ಞರು ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದಾರೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತುಕೊಂಡಷ್ಟೂ ವ್ಯಕ್ತಿಯ ತಿಳುವಳಿಕೆ ಮಟ್ಟ, ವ್ಯಾವಹಾರಿಕ ಕೌಶಲ, ಭಾಷಾ ಸಂಪತ್ತು, ಸಾಹಿತ್ಯ ಜ್ಞಾನ ಹೆಚ್ಚುವುದರಲ್ಲಿ ಸಂಶಯವಿಲ್ಲ. ಇದೇನೇ ಇದ್ದರೂ ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಮಾತೃಭಾಷೆಯಲ್ಲಿ ವ್ಯವಹರಿಸಬಲ್ಲಷ್ಟು ಸುಲಭವಾಗಿ, ಕಷ್ಟಪಟ್ಟು ಕಲಿಯಬೇಕಾದ ಇತರ ಭಾಷೆಗಳಲ್ಲಿ ವ್ಯವಹರಿಸಲಾರನು.
ಮಗುವಿಗೆ ಅದರ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯೇ ಅತ್ಯುತ್ತಮ ಶಿಕ್ಷಣ ಮಾಧ್ಯಮವೆಂದು ಪ್ರಪಂಚದ ಎಲ್ಲ ಶಿಕ್ಷಣತಜ್ಞರೂ ಅಭಿಪ್ರಾಯ ಪಡುತ್ತಾರೆ. ಒಂದು ವಿದೇಶೀ ಮಾಧ್ಯಮದಲ್ಲಿ ಕಲಿಯುವುದೆಂದರೆ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಬಾಯಿಪಾಠ ಮಾಡುವುದಕ್ಕೇ ಹೆಚ್ಚು ಅವಕಾಶ ನೀಡಿದಂತಾಗುವುದೆಂದು ತಜ್ಞರ ಅಭಿಮತ. “ತಮ್ಮದಲ್ಲದ ಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಂತೆಯೇ” ಎಂದು ಗಾಂಧೀಜಿ ವರ್ಣಿಸಿದ್ದರೆ, “ವಿದ್ಯಾರ್ಥಿಯ ಭಾಷೆಯಿಂದ ಶಿಕ್ಷಣದ ಭಾಷೆಯ ವಿಚ್ಛೇದನಗೊಂಡಿರುವುದು ಭಾರತ ಹೊರತು ಪ್ರಪಂಚದ ಇನ್ನಾವ ದೇಶದಲ್ಲೂ ಕಾಣಸಿಗದು” ಎಂದು ರವೀಂದ್ರನಾಥ ಠಾಕೂರರು ಆಶ್ಚರ್ಯ ಪಟ್ಟಿದ್ದಾರೆ.
ತನ್ನ ಮಾತೃಭಾಷೆಯ ಮೂಲಕ ಮಗು ವಿಚಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಮಗುವಿಗೆ ಅದರ ಪರಿಸರದೊಂದಿಗೆ ಸಂಪರ್ಕ ಕಲ್ಪಿಸಿ ಅದನ್ನು ಸಮಾಜದ ಸಂಸ್ಕೃತಿ ಮತ್ತು ಅನುಭವದಲ್ಲಿ ಪಾಲುದಾರನನ್ನಾಗಿ ಮಾಡುತ್ತದೆ. ಇದನ್ನೇ ಬಿ.ಎಂ. ಶ್ರೀಯವರು ತಮ್ಮ “ಕನ್ನಡ ನಾಡಿಗೆ ಕನ್ನಡವೇ ಗತಿ” ಎಂಬ ಪ್ರಸಿದ್ಧ ಭಾಷಣದಲ್ಲಿ ಹೀಗೆ ಪುಷ್ಟೀಕರಿಸುತ್ತಾರೆ. “ಭಾಷೆಯೆನ್ನುವುದು ನಿತ್ಯಗಟ್ಟಳೆಯ ವ್ಯಾಪಾರಕ್ಕಾಗಿ ಇರುವುದು ಮಾತ್ರವಲ್ಲ, ಅದರ ಮುಖ್ಯಕಾರ್ಯಾ ಒಂದು ಜನಾಂಗವನ್ನು ಸಂಸ್ಕಾರದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧಕವಾಗುವುದುಈ॒ ಕೆಲಸ ಕಷ್ಟಪಟ್ಟು ನಮ್ಮ ಬುದ್ಧಿ ಶಕ್ತಿಯನ್ನೆಲ್ಲಾ ವೆಚ್ಚ ಮಾಡಿ ಕಲಿಯುವ ಪರ ಭಾಷೆಯಿಂದ ನೆರವೇರುವುದಿಲ್ಲ. ಯಾವುದು ಸರಾಗವಾಗಿ ನಮ್ಮನ್ನು ಒಲಿದು ಬಂದಿರುತ್ತದೆಯೋ, ಯಾವುದು ನಮ್ಮನ್ನು ಬೆನ್ನಟ್ಟಿ ಬಂದು ರಕ್ತಗತವಾಗಿರುತ್ತದೋ ಅಂಥ ಭಾಷೆಯಿಂದ ಮಾತ್ರವೇ ಇದು ಸಾಧ್ಯ.
Saturday, 12 December 2020
ಅಂಕಣ : ಶಿಕ್ಷಣ ಮಾಧ್ಯಮವಾಗಿ ಕನ್ನಡ
Subscribe to:
Post Comments (Atom)
No comments:
Post a Comment